ದ.ಕ.: ಒಂದು ಡೆಂಗ್ ಸಾವು ದೃಢ, 2 ಪ್ರಕರಣಗಳ ಮಾದರಿ ಮಣಿಪಾಲಕ್ಕೆ; ಜಿಲ್ಲಾಧಿಕಾರಿ

Update: 2019-07-19 13:36 GMT

ಮಂಗಳೂರು, ಜು.19: ದ.ಕ. ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗವಾದ ಡೆಂಗ್ ಹಾಗೂ ಮಲೇರಿಯಾ ಹಾವಳಿ ತೀವ್ರಗೊಂಡಿದ್ದು, ಕಡಬದಲ್ಲಿ ಮೂರು ವಾರಗಳ ಹಿಂದೆ ವೀಣಾ ನಾಯಕ್ ಎಂಬ ಮಹಿಳೆಯ ಸಾವು ಡೆಂಗ್‌ನಿಂದ ಎಂಬುದಾಗಿ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.

ನಗರದ ಕೊಡಿಯಾಲ್‌ಬೈಲ್‌ನಲ್ಲಿ ಕೆಲ ದಿನಗಳ ಹಿಂದೆ 8ರ ಹರೆಯದ ಬಾಲಕ ಕೃಷ್‌ನ ಸಾವು ಹಾಗೂ ಜಪ್ಪು ಮಾರುಕಟ್ಟೆ ಬಳಿಯ ಗುಜ್ಜರಕೆರೆಯ ವಿದ್ಯಾರ್ಥಿನಿ ಶ್ರದ್ಧಾ ಕೆ. ಶೆಟ್ಟಿಯವರ ಸಾವಿನ ಬಗ್ಗೆ ಸ್ವಲ್ಪ ಅನುಮಾನವನ್ನು ವೈದ್ಯ ತಜ್ಞರು ವ್ಯಕ್ತಪಡಿಸಿದ್ದು, ಮಾದರಿಯನ್ನು ಹೆಚ್ಚಿನ ತಪಾಸಣೆಗಾಗಿ ಮಣಿಪಾಲಕ್ಕೆ ಕಳುಹಿಸಲಾಗಿದೆ. ಈ ವಿದ್ಯಾರ್ಥಿಗಳು ಜ್ವರಕ್ಕೆ ತುತ್ತಾಗಿ ಸಾವಿಗೀಡಾಗಿದ್ದರೂ ಅವರಲ್ಲಿ ಎಚ್‌ಎಲ್‌ಎಚ್ ಅಂಶ ಕಂಡು ಬಂದಿರುವುದರಿಂದ ಹೆಚ್ಚಿನ ತಪಾಸಣೆಯ ಅಗತ್ಯವಿದೆ. ಜಿಲ್ಲೆಯಲ್ಲಿ ಇಂದಿನವರೆಗೆ ಒಟ್ಟು 404 ಡೆಂಗ್ ಪ್ರಕರಣಗಳು ದೃಢಗೊಂಡಿವೆ ಎಂದು ಜಿಲ್ಲಾಧಿಕಾರಿ ಸುದ್ದಿಗೋಷ್ಠಿಯಲ್ಲಿಂದು ಸಂಜೆ ತಿಳಿಸಿದರು.

ಮಂಗಳೂರು ತಾಲೂಕಿನಲ್ಲಿ 253, ಬಂಟ್ವಾಳದಲ್ಲಿ 39, ಪುತ್ತೂರಿನಲ್ಲಿ 67, ಬೆಳ್ತಂಗಡಿಯಲ್ಲಿ 27 ಹಾಗೂ ಸುಳ್ಯದಲ್ಲಿ 23 ಡೆಂಗ್ ಪ್ರಕರಣಗಳು ವರದಿಯಾಗಿವೆ.

''ಜುಲೈ 1ರಿಂದ ಜಿಲ್ಲೆಯಲ್ಲಿ ಅಲ್ಪಸ್ವಲ್ಪ ಮಳೆ ಬಿಸಿಲಿನ ವಾತಾವರಣದಿಂದ ಸಾಂಕ್ರಾಮಿಕ ರೋಗಗಳನ್ನು ಹರಡುವ ಸೊಳ್ಳೆಗಳ ಉತ್ಪತ್ತಿ ತೀವ್ರಗೊಂಡಿದೆ. ಇದರಿಂದಾಗಿ ಡೆಂಗ್ ಹಾಗೂ ಮಲೇರಿಯಾ ಪ್ರಕರಣಗಳು ಉಲ್ಬಣಗೊಂಡಿವೆ. ನಗರ ಪಾಲಿಕೆಯಲ್ಲಿ ಈ ಹಾವಳಿ ಹೆಚ್ಚಿದ್ದು, ಈಗಾಗಲೇ ಮಹಾನಗರ ಪಾಲಿಕೆ ವತಿಯಿಂದ ಫಾಗಿಂಗ್‌ನಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸದ್ಯ ನಿನ್ನೆಯಿಂದ ಮಳೆ ಬರುತ್ತಿದೆ. ಇದೇ ರೀತಿ ಮಳೆ ಮುಂದುವರಿದರೆ ಸೊಳ್ಳೆಗಳ ಲಾರ್ವಾ ನಾಶಗೊಂಡು ರೋಗ ನಿಯಂತ್ರಣವಾಲಿದೆ'' ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾಡಳಿತವು ಇದರೊಂದಿಗೆ ಕಮಾಂಡ್ ಸೆಂಟರ್ (ತುರ್ತು ಕೇಂದ್ರ) ಆರಂಭಿಸಿದೆ. ಈ ಕೇಂದ್ರದಡಿ ಹಿರಿಯ ಅಧಿಕಾರಿಗಳನ್ನು ಒಳಗೊಂಡ ತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿವೆ. ಒಂದು ತಂಡ ಯೋಜನೆ ಮತ್ತು ಅಂಕಿಅಂಶ ಸಂಗ್ರಹ ಕಾರ್ಯ ನಡೆಸಿದರೆ, ಮತ್ತೊಂದು ತಂಡ ಮಾಹಿತಿ ಕಲೆ ಹಾಕಲಿದೆ. ಇನ್ನೊಂದು ಮಹಾನಗರ ಪಾಲಿಕೆ ತಂಡ (ಸೊಳ್ಳೆಗಳ ಲಾರ್ವಾ ನಾಶ ಸೇರಿದಂತೆ) ಚರಂಡಿಗಳು ಸೇರಿದಂತೆ ಸ್ವಚ್ಛತಾ ಕಾರ್ಯವನ್ನು ಮಾಡಲಿದೆ.  ಮತ್ತೊಂದು ತಂಡ ಸೊಳ್ಳೆ ಉತ್ಪತ್ತಿ ತಾಣಗಳನ್ನು ಗುರುತಿಸುವ ಕಾರ್ಯ ನಡೆಸಲಿದೆ. ಸರಕಾರಿ ಅಧಿಕಾರಿಗಳು, ವೈದ್ಯರಿಂದ ತಪಾಸಣೆ, ಪರಿಶೀಲನೆ, ಕ್ರಮಗಳ ಜತೆಗೆ ಖಾಸಗಿ ವೈದ್ಯರು, ಎನ್‌ಜಿಒಗಳಿಂದಲೂ ಕೂಡಾ ಪರಿಶೀಲನೆ ನಡೆಸಲಾಗುವುದು. ಪ್ರತಿ ದಿನ ಈ ತಂಡಗಳ ಮುಖ್ಯಸ್ಥರು ಸಂಜೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಸೇರಿ ವರದಿ ಒದಗಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ವಿವರಿಸಿದರು.

ಡೆಂಗ್ ಸೊಳ್ಳೆ ನಾಶಕ್ಕೆ ಮನೆಯೊಳಗೂ ಫಾಗಿಂಗ್ ಅಗತ್ಯ!
ಡೆಂಗ್, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳನ್ನು ಹರಡುವ ಸೊಳ್ಳೆಗಳ ನಾಶಕ್ಕಾಗಿ ಫಾಗಿಂಗ್ ನಡೆಸಲಾಗುತ್ತದೆ. ಆದರೆ ಕೆಲವು ಪ್ರದೇಶಗಳಲ್ಲಿ ಫಾಗಿಂಗ್ ನಡೆಸಲಾಗುತ್ತಿಲ್ಲ ಎಂಬ ದೂರು ತಾವು ಇಂತಹ ಸಾಂಕ್ರಾಮಿಕ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭ ಸಾರ್ವಜನಿಕರಿಂದ ಕೇಳಿ ಬಂದಿದೆ. ಆದರೆ ಡೆಂಗ್ ಹರಡುವ ಸೊಳ್ಳೆಗಳು ಮನೆಯೊಳಗೂ ಇರುತ್ತವೆ. ಹೊರಗಡೆ ಫಾಗಿಂಗ್ ಮಾಡುವ ಸಂದರ್ಭ ಅವುಗಳು ಮನೆಯೊಳಗೆ ಸೇರುತ್ತವೆ. ಹಾಗಾಗಿ ಮನೆಯೊಳಗೂ ಫಾಗಿಂಗ್ ಅಗತ್ಯವಾಗಿದೆ. ಜೆಪ್ಪು ಸೇರಿದಂತೆ ಸೊಳ್ಳೆಗಳು ಅಧಿಕವಾಗಿರುವಲ್ಲಿ ಮನೆಯೊಳಗೂ ಫಾಗಿಂಗ್‌ಗೆ ನಿರ್ದೇಶಿಸಲಾಗಿದೆ. ಜನತೆ ಇದಕ್ಕೆ ಸಹಕರಿಸಬೇಕು. ಇಲ್ಲವಾದಲ್ಲಿ ಮನೆಯವರೇ ಫಾಗಿಂಗ್ ವ್ಯವಸ್ಥೆ ಮಾಡಬೇಕು. ಸಾಮಾನ್ಯವಾಗಿ ಸಾಂಬ್ರಾಣಿ ಜತೆಗೆ ಬೇವಿನ ಸೊಪ್ಪು ಹಾಕಿ ಮನೆಯೊಳಗೆ ಹೊಗೆ ಹಾಕುವ ಮೂಲಕ ಜನರು ಮನೆಯೊಳಗಿರುವ ಸೊಳ್ಳೆಗಳನ್ನು ನಿಯಂತ್ರಿಸಬುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಜಪ್ಪು ಮಾರುಕಟ್ಟೆ ಸಮೀಪದ ಗುಜ್ಜರಕೆರೆ ಬಳಿ ಜ್ವರದಿಂದ ಬಲಿಯಾದ ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿದ ಸಂದರ್ಭ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌ರವರು, ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತಿರುವ ಸೊಳ್ಳೆಗಳ ಉತ್ಪತ್ತಿ ಮಾಡುವ ತಾಣಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಮಾತ್ರವಲ್ಲದೆ ನಿರ್ಮಾಣ ಹಂತದ ಕಟ್ಟಡಗಳಲ್ಲಿ ಸೊಳ್ಳೆಗಳ ಲಾರ್ವಾ ಕಾಣಿಸಿಕೊಂಡಲ್ಲಿ ಸಂಬಂಧಪಟ್ಟವರಿಗೆ ದಂಡ ವಿಧಿಸುವ ಮೂಲಕ ಕ್ರಮ ಕೈಗೊಳ್ಳಲು ಸೂಚಿಸಿದರು.

3 ತಜ್ಞ ವೈದ್ಯರ ಆಗಮನ
ಬೆಂಗಳೂರಿನಿಂದ ರಾಜ್ಯ ಸರಕಾರದ ಮೂವರು ತಜ್ಞ ವೈದ್ಯರಾದ ಡಾ. ಮುಹಮ್ಮದ್ ಶರೀಫ್, ಡಾ. ರವಿ ಹಾಗೂ ಡಾ. ಆರ್.ಜಿ. ಪ್ರಕಾಶ್‌ರವರು ಈಗಾಗಲೇ ಆಗಮಿಸಿದ್ದು, ಡೆಂಗ್ ಪ್ರಕರಣಗಳ ಮೇಲ್ವಿಚಾರಣೆ, ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದರು.

ಸಾರ್ವಜನಿಕರು ಸೊಳ್ಳೆ ನಿರೋಧಕಗಳನ್ನು ಬಳಸಿ
ಸಾಂಕ್ರಾಮಿಕ ರೋಗಗಳು ಹರಡಲು ಸೊಳ್ಳೆಗಳ ನಿಯಂತ್ರಣ ಅತೀ ಅಗತ್ಯವಾಗಿದೆ. ಒಂದು ಸೊಳ್ಳೆಗಳು ಉತ್ಪತ್ತಿಯಾಗದಂತೆ ತಡೆಯುವುದು. ಮತ್ತೆ ಸಾರ್ವಜನಿಕರು ಸೊಳ್ಳೆಗಳಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಕಾರ್ಯ ಮಾಡಬೇಕು. ತಮ್ಮ ಮನೆಯ ಸುತ್ತಮುತ್ತ ಸೊಳ್ಳೆಗಳು ಉತ್ಪತ್ತಿಯಾಗದಂತೆ ಗಮನ ಹರಿಸಬೇಕು. ಮಳೆ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಮಾತ್ರವಲ್ಲದೆ ಹಗಲು ಹೊತ್ತಿನಲ್ಲೂ ಸೊಳ್ಳೆ ನಿರೋಧಕ (ಗುಡ್‌ನೈಟ್, ಸೊಳ್ಳೆ ಪರದೆ, ಸಂಪೂರ್ಣ ಮೈ ಮುಚ್ಚುವ ಉಡುಪುಗಳು)ಗಳನ್ನು ಬಳಸಬೇಕು. ಜ್ವರ ಬಂದಾಗ ತಕ್ಷಣ ವೈದ್ಯರ ಮೂಲಕ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದರು.

ಮುನ್ನೆಚ್ಚರಿಕೆ ವಹಿಸಿ: ಗಾಬರಿ ಬೇಡ
ದ.ಕ. ಜಿಲ್ಲೆಯಲ್ಲಿ ಡೆಂಗ್, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಹೊಸತೇನಲ್ಲ. ಮಳೆಗಾಲದಲ್ಲಿ ಸಮರ್ಪಕವಾಗಿ ಮಳೆ ಸುರಿದಯದೆ ಬಿಸಿಲಿನಿಂದ ಕೂಡಿದ ವಾತಾವರಣ ಸೃಷ್ಟಿಯಾದಾಗ ಇಂತಹ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುತ್ತವೆ. ಆದರೆ ಇದಕ್ಕೆ ಮುಂಜಾಗೃತಾ ಕ್ರಮಗಳು ಅಗತ್ಯ. ಈಗಾಗಲೇ ಕಳೆದೆರಡು ದಿನಗಳಿಂದ ಮಳೆ ಸುರಿಯುತ್ತಿದ್ದು, ಇದು ಮುಂದುವರಿದರೆ ಸೊಳ್ಳೆಗಳ ಉತ್ಪತ್ತಿ ನಿಯಂತ್ರಣವಾಗಲಿದೆ. ಹಾಗಾಗಿ ಗಾಬರಿ ಪಡುವ ಅಗತ್ಯವಿಲ್ಲ. ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಾರ್ವಜನಿಕರಿಗೆ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸೂಚಿಸಿದ್ದಾರೆ.

►ತಲೆಸುತ್ತು/ಗಂಟು ನೋವು/ವಸಡು-ಮಲದಲ್ಲಿ ರಕ್ತ/ಜ್ವರದ ಲಕ್ಷಣವಾಗಿದ್ದು, ಕಾಣಿಸಿಕೊಂಡ ತಕ್ಷಣ ಹತ್ತಿರದ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು.
►ಮನೆಯ ಸುತ್ತಮುತ್ತ, ಪರಿಸರದಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು.
►ನಿರ್ಮಾಣ ಹಂತದ ಕಟ್ಟಡಗಳಲ್ಲಿ ನೀರು ನಿಲ್ಲದಂತೆ, ಕೊಳಚೆ ಉಂಟಾಗದಂತೆ ಅಗತ್ಯ ಗಮನ ಹರಿಸಬೇಕು.
►ಹಗಲು ಬಿಸಿಲು, ರಾತ್ರಿ ಮಳೆ ಸುರಿಯುವ ವಾತಾವರಣವೂ ಸೊಳ್ಳೆ ಉತ್ಪತ್ತಿಗೆ ಪೂರಕವಾಗುತ್ತಿದೆ. ಮಳೆ ನೀರು ಅಲ್ಲಲ್ಲಿ ನಿಂತು ಸೊಳ್ಳೆ ಉತ್ಪತ್ತಿಯಾಗುವುದರಿಂದ ಮತ್ತು ಕೊಳಚೆ ನೀರಿನ ನಿಲುಗಡೆಯಿಂದ ಡೆಂಗ್-ಮಲೇರಿಯಾ ಸೊಳ್ಳೆ ಹುಟ್ಟುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News