ಮಂಗಳೂರು: ವಿದ್ಯುತ್ ದರ ಏರಿಕೆ ವಿರುದ್ದ ಮೆಸ್ಕಾಂ ಕಚೇರಿ ಮುಂದೆ ಸಿಪಿಎಂ ಪ್ರತಿಭಟನೆ

Update: 2019-07-19 10:55 GMT

ಮಂಗಳೂರು, ಜು.19: ವಿಪರೀತ ವಿದ್ಯುತ್ ದರ ಏರಿಕೆ, ಹೆಚ್ಚುವರಿ ಡಿಪಾಸಿಟ್, ತಪ್ಪುಲೆಕ್ಕಾಚಾರ ಮುಂತಾದ ಮೆಸ್ಕಾಂನ ಅವ್ಯವಸ್ಥೆಗಳ ವಿರುದ್ದ ಸಿಪಿಎಂ ನೇತೃತ್ವದಲ್ಲಿ ಶುಕ್ರವಾರ ಬಿಜೈಯಲ್ಲಿರುವ ಮೆಸ್ಕಾಂ ಪ್ರಧಾನ ಕಚೇರಿಯ ಮುಂದೆ ಪ್ರತಿಭಟನೆ ನಡೆಯಿತು.

ನೂರಾರು ಸಂಖ್ಯೆಯಲ್ಲಿದ್ದ ಸಿಪಿಎಂ ಕಾರ್ಯಕರ್ತರು, ಸಾರ್ವಜನಿಕರು, ವಿದ್ಯುತ್ ದರ ಏರಿಕೆಯನ್ನು ಹಿಂಪಡೆಯಿರಿ, ಹೆಚ್ಚುವರಿ ಡಿಪಾಸಿಟ್ ಬೇಡವೇ ಬೇಡ, ತಪ್ಪುಲೆಕ್ಕಾಚಾರಗಳನ್ನು ಸರಿಪಡಿಸಿರಿ ಇತ್ಯಾದಿ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭ ಸಿಪಿಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಮಾತನಾಡಿ ಜೀವನಾವಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿರುವುದರ ಜೊತೆಗೆ ವಿದ್ಯುತ್ ದರವೂ ಕೂಡ ತೀವ್ರವಾಗಿ ಹೆಚ್ಚುತ್ತಿದೆ. ಜನಸಾಮಾನ್ಯರ ಬದುಕು ತೀರಾ ದುಸ್ತರವಾಗಿರುವ ಸಂದರ್ಭದಲ್ಲಿ ವಿದ್ಯುತ್ ದರ ಏರಿಕೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ. ಮತ್ತೊಂದು ಕಡೆ ಡಿಪಾಸಿಟ್ ಮೌಲ್ಯ ಕಡಿಮೆಯಾಗಿದೆ ಎಂದು ಜನತೆಗೆ ಪಂಗನಾಮ ಹಾಕಿ ಅವರಿಂದ ಹೆಚ್ಚುವರಿ ಡಿಪಾಸಿಟನ್ನು ವಸೂಲಿ ಮಾಡುವ ಮೂಲಕ ಮೆಸ್ಕಾಂ ಹಗಲು ದರೋಡೆ ನಡೆಸುತ್ತಿದೆ. ವಿದ್ಯುತ್ ಸಂಪರ್ಕ ಪಡೆಯುವಾಗಲೇ ಮೆಸ್ಕಾಂ ನಿಗದಿಪಡಿಸಿದ ಡಿಪಾಸಿಟ್ ನೀಡಲಾಗಿದ್ದರೂ ವರ್ಷಕ್ಕೆರಡು ಬಾರಿ ಬಲವಂತದಿಂದ ಗ್ರಾಹಕರಿಂದ ಡಿಪಾಸಿಟ್ ಹೆಸರಿನಲ್ಲಿ ಅಕ್ರಮ ವಸೂಲಿ ಮಾಡಲಾಗುತ್ತಿದೆ. ಅಲ್ಲದೆ ಜನರಿಗೆ ಅರ್ಥವಾಗದ ಲೆಕ್ಕಾಚಾರಗಳನ್ನು ಬಳಸಿ ಹೆಚ್ಚಿನ ಮೊತ್ತದ ಬಿಲ್‌ಲ್ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಪಿಎಂ ಮಂಗಳೂರು ನಗರ ಉತ್ತರ ಕಾರ್ಯದರ್ಶಿ ದಯಾನಂದ ಶೆಟ್ಟಿ ಮಾತನಾಡಿ ದಶಕಗಳ ಹಿಂದೆ ವಿದ್ಯುತ್ ದರವನ್ನು ಪೈಸೆಗಳ ಲೆಕ್ಕಾಚಾರದಲ್ಲಿ ಏರಿಸಲೂ ಕೂಡ ಹಿಂಜರಿಯಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಜನತೆಗೆ ಯಾವುದೇ ರೀತಿಯ ಮುನ್ಸೂಚನೆ ನೀಡದೆ ವರ್ಷಕ್ಕೆ 2 ಬಾರಿ ಏಕಾಏಕಿಯಾಗಿ ವಿದ್ಯುತ್ ದರವನ್ನು ವಿಪರೀತವಾಗಿ ಹೆಚ್ಚಿಸಿದೆ. ಇದರಿಂದಾಗಿ ಕುಟುಂಬವೊಂದರ ಒಟ್ಟು ಖರ್ಚಿನ ಕಾಲು ಭಾಗ ವಿದ್ಯುತ್ ಬಿಲ್ ಪಾವತಿಸಲು ಮೀಸಲಿಡಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ ಎಂದು ಹೇಳಿದರು.

ಸಿಪಿಎಂ ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಜೆ.ಬಾಲಕ್ರಷ್ಣ ಶೆಟ್ಟಿ, ಸಿಪಿಎಂ ದ.ಕ.ಜಿಲ್ಲಾ ಸಮಿತಿ ಸದಸ್ಯ ಯೋಗೀಶ್ ಜಪ್ಪಿನಮೊಗರು ಮಾತನಾಡಿದರು.

ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ನಾಯಕರಾದ ಜಯಂತಿ ಬಿ.ಶೆಟ್ಟಿ, ಸಂತೋಷ್ ಬಜಾಲ್, ಮಂಗಳೂರು ನಗರ ಮುಖಂಡರಾದ ಬಾಬು ದೇವಾಡಿಗ,ಬಶೀರ್ ಪಂಜಿಮೊಗರು,ದಿನೇಶ್ ಶೆಟ್ಟಿ, ಅಶೋಕ್ ಶ್ರೀಯಾನ್, ಮುಸ್ತಫಾ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News