ನ್ಯೂಝಿಲ್ಯಾಂಡ್ ವರ್ಷದ ವ್ಯಕ್ತಿ ಪ್ರಶಸ್ತಿಗೆ ಇಂಗ್ಲೆಂಡ್‌ನ ಸ್ಟಾರ್ ಆಟಗಾರನ ನಾಮನಿರ್ದೇಶನ!

Update: 2019-07-19 14:06 GMT

ವೆಲ್ಲಿಂಗ್ಟನ್, ಜು.19: ಐಸಿಸಿ ವಿಶ್ವಕಪ್ ಕ್ರಿಕೆಟ್ ಫೈನಲ್ ಅತ್ಯುತ್ತಮ ಪ್ರದರ್ಶನ ನೀಡಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದ ಇಂಗ್ಲೆಂಡ್‌ನ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಇದೀಗ ನ್ಯೂಝಿಲ್ಯಾಂಡ್‌ನ ವರ್ಷದ ವ್ಯಕ್ತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

  ಫೈನಲ್‌ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಗರಿಷ್ಠ ಬೌಂಡರಿ ಗಳಿಸಿದ ಆಧಾರದಲ್ಲಿ ಜಯ ಸಾಧಿಸಿದ್ದ ಇಂಗ್ಲೆಂಡ್ 44 ವರ್ಷಗಳ ಬಳಿಕ ಕೊನೆಗೂ ವಿಶ್ವಕಪ್ ಕನಸನ್ನು ಈಡೇರಿಸಿಕೊಂಡಿತ್ತು. ಅಜೇಯ 84 ರನ್ ಸಿಡಿಸಿದ್ದ ಸ್ಟೋಕ್ಸ್ ನ್ಯೂಝಿಲ್ಯಾಂಡ್‌ನ ಗೆಲುವಿನ ಕನಸಿಗೆ ಕೊಳ್ಳಿ ಇಟ್ಟಿದ್ದರು.

 28ರ ಹರೆಯದ ಸ್ಟೋಕ್ಸ್ ನ್ಯೂಝಿಲ್ಯಾಂಡ್‌ನ ಕ್ರೈಸ್ಟ್‌ಚರ್ಚ್‌ನಲ್ಲಿ ಜನಿಸಿದ್ದರು. ಸ್ಟೋಕ್ಸ್ ತಂದೆ ಗೆರಾರ್ಡ್ ರಗ್ಬಿ ಲೀಗ್‌ಗೆ ಕೋಚಿಂಗ್ ನೀಡುವ ಕೆಲಸಕ್ಕಾಗಿ ಇಂಗ್ಲೆಂಡ್‌ಗೆ ತೆರಳಿದ ಕಾರಣ ಸ್ಟೋಕ್ಸ್ ಇಂಗ್ಲೆಂಡ್‌ನಲ್ಲಿ ಬೆಳೆದು ದೊಡ್ಡವರಾದರು. ಸ್ಟೋಕ್ಸ್ ಹೆತ್ತವರು ನ್ಯೂಝಿಲ್ಯಾಂಡ್‌ಗೆ ವಾಪಸಾಗಿದ್ದರೂ ಸ್ಟೋಕ್ಸ್ ಮಾತ್ರ ಇಂಗ್ಲೆಂಡ್‌ನಲ್ಲೇ ಉಳಿದುಕೊಂಡರು. ಸ್ಟೋಕ್ಸ್ ಈ ತನಕ ಕಿವೀಸ್ ಪರ ಕ್ರಿಕೆಟ್ ಪಂದ್ಯವನ್ನು ಆಡಿಲ್ಲ.

ಜುಲೈ 1 ರಂದು ಪ್ರಶಸ್ತಿಯ ನಾಮನಿರ್ದೇಶನ ಪ್ರಕ್ರಿಯೆ ಆರಂಭವಾಗಿದೆ. ಡಿಸೆಂಬರ್‌ನಲ್ಲಿ ಕಿರು ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಫೆಬ್ರವರಿಯಲ್ಲಿ ವಿಜೇತರ ಹೆಸರು ಘೋಷಣೆಯಾಗಲಿದೆ.

 ಸಾಮಾನ್ಯವಾಗಿ ಪ್ರಶಸ್ತಿಯನ್ನು ಸಮುದಾಯದ ಪ್ರಮುಖ ಸದಸ್ಯರುಗಳಿಗೆ ನೀಡಲಾಗುತ್ತದೆ. ಇತ್ತೀಚೆಗೆ ಕಾಮಿಡಿಯನ್ ಮೈಕ್ ಕಿಂಗ್ ಪ್ರಶಸ್ತಿ ಪಡೆದಿದ್ದರು.

2016ರಲ್ಲಿ ಮಾಜಿ ಅಲ್ ಬ್ಲಾಕ್ಸ್ ನಾಯಕ ರಿಚಿ ಮಕ್‌ಕಾವ್ ಈ ಪ್ರಶಸ್ತಿ ಜಯಿಸಿದ ಕೊನೆಯ ಕ್ರೀಡಾಪಟು. 2015ರಲ್ಲಿ ಸತತ ಎರಡನೇ ಬಾರಿ ರಗ್ಬಿ ವಿಶ್ವಕಪ್ ಪ್ರಶಸ್ತಿ ಜಯಿಸಲು ತಂಡಕ್ಕೆ ಮಾರ್ಗದರ್ಶನ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News