ರಣಹದ್ದುಗಳ ಸಂಖ್ಯೆ ಮೂರು ದಶಕಗಳಲ್ಲಿ ಗಣನೀಯ ಇಳಿಕೆ: ಸರಕಾರ

Update: 2019-07-19 16:10 GMT

ಹೊಸದಿಲ್ಲಿ, ಜು.19: ದೇಶದಲ್ಲಿ ರಣಹದ್ದುಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದ್ದು, ಕಳೆದ ಮೂರು ದಶಕಗಳಲ್ಲಿ 4 ಕೋಟಿಯಿಂದ 19,000ಕ್ಕೆ ಇಳಿದಿದೆ ಎಂದು ಪರಿಸರ ಸಚಿವಾಲಯ ಶುಕ್ರವಾರ ಸಂಸತ್‌ನಲ್ಲಿ ತಿಳಿಸಿದೆ.

ದೇಶದಲ್ಲಿ ರಣಹದ್ದುಗಳ ಸ್ಥಿತಿಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೆಕರ್, ದೇಶೀಯ ರಣಹದ್ದುಗಳ ಮೂರು ಜಾತಿಗಳು ವಿನಾಶದ ಅಂಚಿನಲ್ಲಿವೆ, ಅವುಗಳೆಂದರೆ, ಶ್ವೇತ ಬೆನ್ನಿನ ರಣಹದ್ದು, ಉದ್ದ ಕುತ್ತಿಗೆಯ ರಣಹದ್ದು ಮತ್ತು ಗಿಡ್ಡ ಕುತ್ತಿಗೆಯ ರಣಹದ್ದು. ಇವುಗಳ ಸಂಖ್ಯೆ ಕ್ರಮವಾಗಿ 6,000, 12,000 ಮತ್ತು 1,000 ಇದೆ ಎಂದು ತಿಳಿಸಿದ್ದಾರೆ. ರಣಹದ್ದುಗಳ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆಯಾಗಿದೆ. ಈ ಹಕ್ಕಿಗಳ ಸಂಖ್ಯೆಯಲ್ಲಿ ಇಳಿಕೆಯನ್ನು 90ರ ದಶಕದ ಮಧ್ಯದಲ್ಲಿ ಗಮನಿಸಲಾಯಿತು ಮತ್ತು 2007ರ ವೇಳೆಗೆ ದೇಶೀಯ ರಣಹದ್ದುಗಳ ಜನಸಂಖ್ಯೆಯಲ್ಲಿ ಶೇ.99 ನಶಿಸಿ ಹೋಗಿತ್ತು ಎಂದು ಜಾವಡೆಕರ್ ತಿಳಿಸಿದ್ದಾರೆ.

ರಣಹದ್ದುಗಳ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಲು ಪ್ರಮುಖ ಕಾರಣ ಪಶುಗಳಿಗೆ ನೋವು ನಿವಾರಣೆಗೆ ಮತ್ತು ಸೋಂಕು ತಡೆಗೆ ನೀಡುವ ಡೈಕ್ಲೊಫೆನಾಕ್ ಎಂಬ ಔಷಧಿಯ ಸೇವನೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ರಣಹದ್ದುಗಳ ಪಾಲಿಗೆ ಡೈಕ್ಲೊಫೆನಾಕ್ ಮಾರಣಾಂತಿಕವಾಗಿದೆ. 2006ರಲ್ಲಿ ಸರಕಾರ ಈ ಔಷಧಿಯನ್ನು ಪಶುಗಳಿಗೆ ಬಳಸುವುದರ ಮೇಲೆ ನಿಷೇಧ ಹೇರಿತ್ತು. ಆದರೆ ಮನುಷ್ಯರಿಗೆ ನೀಡುವ ಡೈಕ್ಲೊಫೆನಾಕ್‌ನ ದುಪ್ಪಟ್ಟು ಪ್ರಮಾಣವನ್ನು ಅಕ್ರಮವಾಗಿ ಪಶುಗಳಿಗೆ ನೀಡಲಾಗುತ್ತಿರುವುದರಿಂದ ಈಗಲೂ ರಣಹದ್ದುಗಳು ಈ ವಿಷಕ್ಕೆ ಬಲಿಯಾಗುತ್ತಿವೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News