ರೈಲಿನಲ್ಲಿ ಮಾಜಿ ಶಾಸಕನ ಮೇಲೆ ದಾಳಿ ಪ್ರಶ್ನಿಸಿ ರಾಜ್ಯಸಭೆಯಲ್ಲಿ ಗದ್ದಲ

Update: 2019-07-19 16:27 GMT

ಹೊಸದಿಲ್ಲಿ, ಜು.19: ಮಧ್ಯ ಪ್ರದೇಶದ ಮಾಜಿ ಶಾಸಕನ ಮೇಲೆ ರೈಲಿನಲ್ಲಿ ನಡೆದ ದಾಳಿಯನ್ನು ಪ್ರಶ್ನಿಸಿ ಶುಕ್ರವಾರ ರಾಜ್ಯಸಭೆಯಲ್ಲಿ ಕೋಲಾಹಲ ಸೃಷ್ಟಿಸಿದ ವಿರೋಧ ಪಕ್ಷದ ಸದಸ್ಯರು ರೈಲ್ವೇ ಸಹಾಯಕ ಸಚಿವ ಸುರೇಶ್ ಅಂಗಡಿ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಂಡಿಲ್ಲ ಎಂದು ಕಿಡಿಕಾರಿದ್ದಾರೆ.

ಪ್ರಶ್ನಾವಳಿ ಅವಧಿಯಲ್ಲಿ ಮಾತನಾಡಿದ ಎಸ್‌ಪಿ ನಾಯಕ ಜಾವೆದ್ ಅಲಿ ಖಾನ್, ಗೊಡ್ವಾನ ಎಕ್ಸ್‌ಪ್ರೆಸ್‌ನಲ್ಲಿ ಮಧ್ಯ ಪ್ರದೇಶದ ಮಾಜಿ ಶಾಸಕ ಡಾ. ಸುನಿಲಮ್ ಅವರ ಮೇಲೆ ನಡೆದ ದಾಳಿಯ ವಿಷಯವನ್ನು ಪ್ರಸ್ತಾಪಿಸಿದರು. ಜುಲೈ 15ರಂದು ನಡೆದ ಈ ಘಟನೆಯ ಬಗ್ಗೆ ರೈಲ್ವೆ ಇಲಾಖೆಗೆ ಟ್ವಿಟರ್ ಮೂಲಕ ತಿಳಿಸಲಾಗಿದ್ದು ಈ ಬಗ್ಗೆ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಎಂಬುದನ್ನು ತಿಳಿಯಲು ಖಾನ್ ಬಯಸಿದ್ದರು. ಮಾಜಿ ಶಾಸಕ ಗೊಡ್ವಾನ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕೆಲವು ದುಷ್ಕರ್ಮಿಗಳು ಬೀನ ಎಂಬದಲ್ಲಿ ರೈಲನ್ನೇರಿದ್ದರು ಮತ್ತು ಅವರನ್ನು ಥಳಿಸಲು ಆರಂಭಿಸಿದ್ದರು. ಭೋಪಾಲ್‌ನಲ್ಲಿ ಇನ್ನಷ್ಟು ದಾಳಿಕೋರರು ರೈಲನ್ನೇರಿದಾಗ ಪ್ರಾಣವನ್ನು ಉಳಿಸುವ ಉದ್ದೇಶದಿಂದ ಮಾಜಿ ಶಾಸಕ ರೈಲಿನ ಶೌಚಾಲಯದಲ್ಲಿ ಅಡಗಿಕೊಳ್ಳಬೇಕಾಯಿತು.

ರೈಲು ಹೋಶಂಗಾಬಾದ್ ತಲುಪಿದಾಗ ಕೇವಲ ಓರ್ವ ಪೊಲೀಸ್ ಅಧಿಕಾರಿ ಸ್ಥಳಕ್ಕೆ ಧಾವಿಸಿದ್ದ ಎಂದು ಖಾನ್ ತಿಳಿಸಿದ್ದಾರೆ. ನಮ್ಮ ಸರಕಾರದಲ್ಲಿ ನಾವು ಅವರ್ಯಾರನ್ನೂ ಬಿಡುವುದಿಲ್ಲ. ನಾವು ಅವರೆಲ್ಲರನ್ನೂ ಹಿಡಿಯುತ್ತೇವೆ ಮತ್ತು ಅವರ ಮನೆಗಳ ಒಳಗೆ ಹೊಕ್ಕಿ ಹಲ್ಲೆ ನಡೆಸುತ್ತೇವೆ. ಇದನ್ನು ನಾವು ಮೊದಲೂ ಮಾಡಿದ್ದೇವೆ ಎಂದು ಖಾನ್ ತಿಳಿಸಿದ್ದಾರೆ. ತಪ್ಪಿತಸ್ಥರನ್ನು ಯಾವ ಕಾರಣಕ್ಕೂ ಬಿಡುವುದಿಲ್ಲ ಮತ್ತು ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದ ಎಂದು ಸಚಿವರು ತಿಳಿಸಿದರೂ ಸಮಾಧಾನಗೊಳ್ಳದ ವಿಪಕ್ಷ ಸದಸ್ಯರು ಸದನದಲ್ಲಿ ಗದ್ದಲವೆಬ್ಬಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News