ಭಾರತದ ಆರ್ಥಿಕತೆ 5 ಲಕ್ಷ ಕೋಟಿ ಡಾಲರ್ ತಲುಪಲು ಕಾಂಗ್ರೆಸ್ ಅಡಿಪಾಯ ಕಾರಣ: ಪ್ರಣವ್ ಮುಖರ್ಜಿ

Update: 2019-07-19 16:39 GMT

ಹೊಸದಿಲ್ಲಿ, ಜು. 19: ಭಾರತದ ಆರ್ಥಿಕತೆ 2024ರ ಹೊತ್ತಿಗೆ 5 ಲಕ್ಷ ಕೋಟಿ ಡಾಲರ್ ಆಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಆದರೆ, ಇದು ಸ್ವರ್ಗದಿಂದ ಇಳಿದು ಬರುವುದಿಲ್ಲ. ಇದಕ್ಕೆ ಬಲವಾದ ಅಡಿಪಾಯವನ್ನು ಹಾಕಿರುವುದು ಬ್ರಿಟಿಷರಲ್ಲ. ಸ್ವಾತಂತ್ರ್ಯದ ಬಳಿಕ ಭಾರತೀಯರು ಹಾಕಿರುವುದು ಎಂದು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹೇಳಿದ್ದಾರೆ.

 ಸಮೃದ್ಧಾ ಭಾರತ್ ಫೌಂಡೇಶನ್ ದಿಲ್ಲಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ‘ಫರ್ದರಿಂಗ್ ಇಂಡಿಯಾಸ್ ಪ್ರಾಮಿಸ್’ ಕುರಿತ ಮಾತನಾಡಿದರು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜುಲೈ 5ರಂದು ಬಜೆಟ್ ಭಾಷಣದಲ್ಲಿ, ಮುಂದಿನ ವರ್ಷ ಭಾರತ 3 ಲಕ್ಷ ಕೋಟಿ ಡಾಲರ್ ಆರ್ಥಿಕತೆಯಾಗಲಿದೆ. 2024ರ ಹೊತ್ತಿಗೆ 5 ಲಕ್ಷ ಕೋಟಿ ಡಾಲರ್ ಆರ್ಥಿಕತೆಯ ಗುರಿ ಸಾಧಿಸಲು ರಚನಾತ್ಮಕ ಸುಧಾರಣೆಗಳು ಅಗತ್ಯ ಇದೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಪ್ರಣವ್ ಮುಖರ್ಜಿ ಈ ಹೇಳಿಕೆ ನೀಡಿದ್ದಾರೆ.

 ಕಾಂಗ್ರೆಸ್ ಸರಕಾರ 1.8 ಲಕ್ಷ ಕೋಟಿ ಡಾಲರ್‌ನ ಬಲವಾದ ಅಡಿಪಾಯ ಹಾಕಿದೆ. ಕಾಂಗ್ರೆಸ್‌ನ 50-55 ವರ್ಷಗಳ ಆಡಳಿತವನ್ನು ಟೀಕಿಸುವರು ಇದನ್ನು ಮರೆತಿದ್ದಾರೆ. ಭಾರತದ ಆರ್ಥಿಕತೆ 5 ಲಕ್ಷ ಕೋಟಿ ಡಾಲರ್‌ನ ಗುರಿ ತಲುಪಬೇಕಾದರೆ, ಅದಕ್ಕೆ ಕಾಂಗ್ರೆಸ್ ಹಾಕಿದ 1.8 ಲಕ್ಷ ಕೋಟಿ ಡಾಲರ್‌ನ ಅಡಿಪಾಯ ಕಾರಣ ಎಂದು ಮುಖರ್ಜಿ ಹೇಳಿದ್ದಾರೆ. ಭಾರತ 5 ಲಕ್ಷ ಕೋಟಿ ಡಾಲರ್ ಆಥಿರ್ಕಕತೆಯಾಗಲು ಜವಾಹರ್‌ಲಾಲ್ ನೆಹರೂ, ಮನಮೋಹನ್ ಸಿಂಗ್ ಹಾಗೂ ನರಸಿಂಹ ರಾವ್ ನೇತೃತ್ವದ ಸರಕಾರ ಸಹಿತ ಈ ಹಿಂದಿನ ಸರಕಾರಗಳು ಹಾಕಿದ ಅಡಿಪಾಯವೇ ಕಾರಣ ಎಂದು ಅವರು ತಿಳಿಸಿದರು. ಭಾರತ ಆರ್ಥಿಕತೆಯಲ್ಲಿ ಈ ರೀತಿ ಚಿಮ್ಮಲು ಜವಾಹರ್‌ಲಾಲ್ ನೆಹರೂ ಹಾಗೂ ಇತರು ಸ್ಥಾಪಿಸಿದ ಐಐಟಿಗಳು, ಇಸ್ರೊ, ಐಐಎಂಗಳು ಹಾಗೂ ಬ್ಯಾಂಕಿಂಗ್ ನೆಟ್‌ವರ್ಕ್ ಮೊದಲಾದವು ಕಾರಣ. ಆರ್ಥಿಕತೆಯನ್ನು ಉದಾರೀಕರಣಗೊಳಿಸುವ ಸಂದರ್ಭ ಇದೆಲ್ಲವನ್ನೂ ಮನಮೋಹನ್ ಸಿಂಗ್ ಹಾಗೂ ನರಸಿಂಹ ರಾವ್ ಮಾಡಿದರು ಎಂದು ಪ್ರಣವ್ ಮುಖರ್ಜಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News