ಸಂಸತ್ ಅಧಿವೇಶನ 2-3 ದಿನ ವಿಸ್ತರಣೆ ಸಾಧ್ಯತೆ

Update: 2019-07-19 18:02 GMT

ಹೊಸದಿಲ್ಲಿ,ಜು.19: ತನ್ನ ಶಾಸಕಾಂಗ ವ್ಯವಹಾರವನ್ನು ಪೂರ್ಣಗೊಳಿಸಲು ಹಾಲಿ ನಡೆಯುತ್ತಿರುವ ಸಂಸತ್ ಅಧಿವೇಶನವನ್ನು ಕನಿಷ್ಠ ಎರಡರಿಂದ ಮೂರು ದಿನಗಳ ಕಾಲ ವಿಸ್ತರಿಸಲು ಸರಕಾರವು ಪರಿಶೀಲಿಸುತ್ತಿದೆ ಮತ್ತು ಈ ಸಂಬಂಧ ಪ್ರತಿಪಕ್ಷಗಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಬಿಜೆಪಿ ನಾಯಕರು ಅವರ ಸಂಪರ್ಕದಲ್ಲಿದ್ದಾರೆ ಎಂದು ಬಲ್ಲ ಮೂಲಗಳು ಶುಕ್ರವಾರ ತಿಳಿಸಿವೆ.

ಅಗತ್ಯವಾದರೆ ಅಧಿವೇಶನವನ್ನು ವಿಸ್ತರಿಸಬಹುದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಹೇಳಿದ್ದರು.

17ನೇ ಲೋಕಸಭೆಯ ಮೊದಲ ಅಧಿವೇಶನವು ಜೂ.17ರಂದು ಆರಂಭಗೊಂಡಿದ್ದು,ನಿಗದಿಯಂತೆ ಜು.26ರಂದು ಅಂತ್ಯಗೊಳ್ಳಲಿದೆ.

ಹಾಲಿ ಅಧಿವೇಶನವು ಕಳೆದ 20 ವರ್ಷಗಳಲ್ಲಿಯೇ ಅತ್ಯಂತ ಫಲದಾಯಕವಾಗಿದೆ. ಲೋಕಸಭೆಯು ಮಂಗಳವಾರದವರೆಗೆ ಶೇ.128ರಷ್ಟು ಉತ್ಪಾದಕತೆಯನ್ನು ದಾಖಲಿಸಿದೆ. ಅದು ನಿಗದಿತ ಸಮಯವನ್ನೂ ಮೀರಿ ಕಾರ್ಯಾಚರಿಸುತ್ತಿದೆ. ಕನಿಷ್ಠ ಎರಡು ಸಂದರ್ಭಗಳಲ್ಲಿ ಅದು ತನ್ನ ಶಾಸಕಾಂಗ ವ್ಯವಹಾರಗಳನ್ನು ಪೂರ್ಣಗೊಳಿಸಲು ಮಧ್ಯರಾತ್ರಿಯವರೆಗೂ ಕಲಾಪಗಳನ್ನು ನಡೆಸಿತ್ತು. ಇದೇ ರೀತಿ ರಾಜ್ಯಸಭೆಯೂ ಈ ಅವಧಿಯಲ್ಲಿ ಶೇ.98ರಷ್ಟು ಉತ್ಪಾದಕತೆಯನ್ನು ದಾಖಲಿಸಿದೆ ಎಂದು ಚಿಂತನ ಚಿಲುಮೆ ಪಿಆರ್‌ಎಸ್ ಲೆಜಿಸ್ಲೇಟಿವ್ ರಿಸರ್ಚ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News