ಉಡುಪಿ: ಪ್ರಿಯಾಂಕಾ ಗಾಂಧಿ ಬಂಧನ ವಿರೋಧಿಸಿ ಕಾಂಗ್ರೆಸ್ ಧರಣಿ

Update: 2019-07-20 10:02 GMT

ಉಡುಪಿ, ಜು.20: ಉತ್ತರ ಪ್ರದೇಶ ಸೋನಭದ್ರ ಗ್ರಾಮದ ಗೋಲಿಬಾರ್ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಲು ತೆರಳಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯನ್ನು ಬಂಧಿಸಿದ ಉತ್ತರ ಪ್ರದೇಶ ಸರಕಾರದ ಪ್ರಜಾಪ್ರಭುತ್ವ ವಿರೋಧಿ ಕ್ರಮ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಶನಿವಾರ ಉಡುಪಿ ಕಾಂಗ್ರೆಸ್ ಭವನದ ಎದುರು ಧರಣಿ ನಡೆಸಿತು.

ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ಜನರ ನೋವಿನಲ್ಲಿ ಭಾಗಿಯಾಗಲು ಹೋದ ಪ್ರಿಯಾಂಕಾ ಗಾಂಧಿಯನ್ನು ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರ ತಡೆದು ದಾರಿ ಮಧ್ಯೆ ನಿಲ್ಲಿಸಿ ಬಂಧಿಸುವುದರೊಂದಿಗೆ ಅಮಾನವೀಯವಾಗಿ ವರ್ತಿಸಿದೆ. ಇಂತಹ ಹೇಯ ಕೃತ್ಯ ತೀವ್ರ ಖಂಡನೀಯ ಎಂದರು. ಉದ್ಯಾವರ ನಾಗೇಶ್ ಕುಮಾರ್ ಮಾತನಾಡಿ, ಉತ್ತರ ಪ್ರದೇಶದಲ್ಲಿ ನಿರಂತರವಾಗಿ ದಲಿತರು, ಅಲ್ಪಸಂಖ್ಯಾತರ ಮೇಲೆ ಹಲ್ಲೆ, ಗುಂಪು ದಾಳಿಗಳು ನಡೆಯುತ್ತಿವೆ. ಈ ಮೂಲಕ ಈ ದೇಶವನ್ನು ಧಾರ್ಮಿಕ ಧ್ರುವೀಕರಣದತ್ತ ಕೊಂಡೊಯ್ಯುವ ಹುನ್ನಾರ ನಡೆಸಲಾಗುತ್ತಿದೆ. ಈ ಕೃತ್ಯಗಳ ಹಿಂದೆ ದೇಶದ ಅಧಿಕಾರ ಹಿಡಿಯಲು ಹಿಡನ್ ಅಜೆಂಡಾ ಅಡಗಿದೆ ಎಂದು ದೂರಿದರು.

ಕಾಂಗ್ರೆಸ್ ಪಕ್ಷಕ್ಕೆ ಜನರ ನೋವಿಗೆ ಸ್ಪಂದಿಸುವ ಅವಕಾಶ ಮಾಡಿಕೊಟ್ಟರೆ ಸಮಸ್ಯೆ ಆಗುತ್ತದೆ ಎಂಬ ಧೋರಣೆಯಿಂದ ಆದಿತ್ಯನಾಥ್ ಸರಕಾರದ ಈ ರೀತಿ ವರ್ತಿಸುತ್ತಿದೆ. ಕಾಂಗ್ರೆಸ್ ಎಂಬುದು ಕೇವಲ ಪಕ್ಷ ಅಲ್ಲ. ಅದು ಜನಪರ ಚಳವಳಿ ಆಗಿದೆ. ಈ ಪಕ್ಷ ಯಾವತ್ತೂ ಜನರ ಧ್ವನಿಗಳಿಗೆ ಕಿವಿಯಾಗಿರುತ್ತದೆ. ಇದನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

ಜ್ಯೋತಿ ಹೆಬ್ಬಾರ್ ಮಾತನಾಡಿ, ಸಂವಿಧಾನವನ್ನು ಬದಲಾವಣೆ ಮಾಡಲು ಯಾರಿದಂಲೂ ಸಾಧ್ಯವಿಲ್ಲ. ಅದು ಈ ದೇಶದ ಪವಿತ್ರ ಗ್ರಂಥ. ಅಧಿಕಾರ ಶಾಶ್ವತ ಅಲ್ಲ ಎಂಬುದನ್ನು ಬಿಜೆಪಿ ಅರಿತುಕೊಳ್ಳಬೇಕು. ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಕೆಲಸ ಮಾಡಿದರೆ ಅವರಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಧರಣಿಯಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್, ಮುಖಂಡರಾದ ಜನಾರ್ದನ ಭಂರ್ಡಾಕರ್, ನರಸಿಂಹಮೂರ್ತಿ, ಚಂದ್ರಿಕಾ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೇರ, ಕುಶಲ್ ಶೆಟ್ಟಿ, ಸರಸು ಡಿ.ಬಂಗೇರ, ಭಾಸ್ಕರ ರಾವ್ ಕಿದಿಯೂರು, ಲೂವಿಸ್ ಲೋಬೊ, ಶಬ್ಬೀರ್ ಅಹ್ಮದ್, ಕಿರಣ್ ಕುಮಾರ್ ಉದ್ಯಾವರ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News