ಬಂಟ್ವಾಳದ ವಸತಿ ಶಾಲೆಗಳಿಗೆ ಲೋಕಾಯುಕ್ತ ಸಿ. ವಿಶ್ವನಾಥ ಶೆಟ್ಟಿ ಭೇಟಿ

Update: 2019-07-20 12:08 GMT

ಬಂಟ್ವಾಳ, ಜು. 20: ಒಂದು ತಿಂಗಳೊಳಗೆ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಲ್ಲಿ ಮೂಲಸೌಕರ್ಯಗಳೊಂದಿಗೆ ಸುಧಾರಣೆಯಾಗಬೇಕು ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಸೂಚನೆ ನೀಡಿದ್ದಾರೆ.

ಅವರು ಶನಿವಾರ ಬಂಟ್ವಾಳದ ಬಿ.ಸಿ.ರೋಡಿನ ಮೊಡಂಕಾಪು ಮತ್ತು ಬಿ.ಸಿ.ರೋಡ್ ಜೋಡುಮಾರ್ಗದಲ್ಲಿರುವ ವಸತಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಟ್ವಾಳದ ಈ ಎರಡೂ ಹಾಸ್ಟೆಲ್‍ಗಳು ಸುಧಾರಣೆ ಆಗಬೇಕಿದೆ. ಇಲ್ಲಿ ಬೇರೆ ಬೇರೆ ಕಡೆಗಳಿಂದ ಮಕ್ಕಳು ಆಗಮಿಸುತ್ತಾರೆ. ವಿದ್ಯಾರ್ಥಿಗಳಿಗೆ ಪಾಠ, ಸೌಕರ್ಯಗಳು ಚೆನ್ನಾಗಿವೆ. ಆದರೆ, ಕಟ್ಟಡದಲ್ಲಿ ಪಾಚಿ ಹಿಡಿದಿದ್ದು, ಸೋರುತ್ತಿದೆ. ಇದನ್ನು ದುರಸ್ತಿಪಡಿಸುವುದರ ಜೊತೆಗೆ ವಿವಿಧ ಸಮಸ್ಯೆಗಳು ತಲೆದೋರದಂತೆ ಎಚ್ಚರವಹಿಸಬೇಕು ಎಂದರು.

ವಿದ್ಯಾರ್ಥಿಗಳೊಂದಿಗೆ ಹಾಗೂ ಶಿಕ್ಷಕರೊಂದಿಗೆ ಮಾತನಾಡಿದ ಲೋಕಾಯುಕ್ತರು, ನಾನು ಬರುತ್ತೇನೆಂದು ತಿಳಿದು ಮೇಲ್ನೊಟಕ್ಕೆ ಮಾತ್ರ ಶುಚಿಯಾಗಿಟ್ಟಿದ್ದೀರಾ? ಎಂದು ಪ್ರಶ್ನಿಸಿದರು.

ಗುತ್ತಿಗೆ ಆಧಾರದಲ್ಲಿ ಕಡಿಮೆ ಸಂಬಳದಲ್ಲಿ ಶಿಕ್ಷಕರು ಇರುವುದನ್ನು ಗಮನಕ್ಕೆ ತಂದ ಸಂದರ್ಭ ಪ್ರತಿ ತರಗತಿಗೂ ಖಾಯಂ ಆಗಿರುವ ಶಿಕ್ಷಕರು ಇಲ್ಲಿರಬೇಕು. ವಿದ್ಯಾರ್ಥಿಗಳ ಸಂಖ್ಯೆ ವೃದ್ಧಿಯಾಗುವಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು. ಬಳಿಕ ಆಶ್ರಮ ಶಾಲಾ ಪಕ್ಕದಲ್ಲಿ ತ್ಯಾಜ್ಯ ಹಾಗೂ ಕಾರ್ಖಾನೆಯಿಂದ ಬರುತ್ತಿರುವ ವಾಯುಮಾಲಿನ್ಯದಿಂದಾಗಿ ವಿದ್ಯಾರ್ಥಿಗಳಿಗೆ ಹಾಗು ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ಮನಗಂಡು ಸಂಬಂಧಪಟ್ಟವರಿಗೆ ನೋಟಿಸ್ ನೀಡುವಂತೆ ಸೂಚಿಸಿದರು.

ಈ ಸಂದರ್ಭ ಪುರಸಭೆ ಮುಖ್ಯಾಧಿಕಾರಿ ಅವರನ್ನು ಬರಹೇಳಲು ಅಧಿಕಾರಿಗಳಿಗೆ ತಿಳಿಸಿದ ಅವರು, ಮಲಿನ, ತ್ಯಾಜ್ಯಗಳ ನಿರ್ವಹಣೆ ಪುರಸಭೆಯ ಜವಾಬ್ದಾರಿಯಾಗಿದ್ದು, ಸಮರ್ಪಕವಾಗಿ ನಿರ್ವಹಿಸಲು ಸೂಚಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ರಶ್ಮಿ ಎಸ್.ಆರ್, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳಾದ ಶಿವಣ್ಣ, ಮೋಹನ್, ಲೋಕಾಯುಕ್ತ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸದಾಶಿವ ಕೈಕಂಬ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News