ಬಂಟ್ವಾಳ ಸಾರ್ವಜನಿಕ ಸರಕಾರಿ ಆಸ್ಪತ್ರೆಯ ವೈದ್ಯರ ಕಾರ್ಯವೈಖರಿಗೆ ಲೋಕಾಯುಕ್ತ ಮೆಚ್ಚುಗೆ

Update: 2019-07-20 12:12 GMT

ಬಂಟ್ವಾಳ, ಜು. 20: ತಾಲೂಕಿನಲ್ಲಿರುವ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕಾರ್ಯವೈಖರಿಗೆ ಲೋಕಾಯುಕ್ತ ನ್ಯಾಯಮೂರ್ತಿ ಸಿ. ವಿಶ್ವನಾಥ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಂಟ್ವಾಳಕ್ಕೆ ಶನಿವಾರ ಆಗಮಿಸಿದ ಅವರು, ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ನಾನಾ ವಿಭಾಗಗಳನ್ನು ವೀಕ್ಷಿಸಿದರು.

ಈ ಸಂದರ್ಭ ಡೆಂಗ್, ಮಲೇರಿಯಾದಂಥ ರೋಗಗಳ ಕುರಿತು ಮಾಹಿತಿ ಪಡೆದ ಅವರು, ರೋಗ ವಾಸಿಯಾಗುವ ನಿಟ್ಟಿನಲ್ಲಿ ವೈದ್ಯರು ಕೈಗೊಳ್ಳುತ್ತಿರುವ ಕ್ರಮಗಳನ್ನು ಶ್ಲಾಘಿಸಿದರು. ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸದಾಶಿವ್, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ಅವರಿಂದ ಮಾಹಿತಿ ಪಡೆದುಕೊಂಡರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಸ್ಪತ್ರೆಯಲ್ಲಿನ ವೈದ್ಯರು ರೋಗಿಗಳನ್ನು ಹೆಚ್ಚಿನ ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ವೈದ್ಯರು ಒಳ್ಳೇದಿದ್ರೆ ಮಾತ್ರ ಆಸ್ಪತ್ರೆಗೆ ಜನ ಬರುತ್ತಾರೆ. ರೋಗಿಗಳ ಸಂಖ್ಯೆ ಹೆಚ್ಚಿರುವಾಗ ಅವರ ಕಡೆಗೆ ಗಮನಹರಿಸಲು ಹೆಚ್ಚಿನ ವೈದ್ಯರ ನೇಮಕಾತಿಯೂ ಆಗಬೇಕು. ಈ ಕುರಿತು ಆರೋಗ್ಯಾಧಿಕಾರಿ ಸರಕಾರದ ಗಮನ ಸೆಳೆಯುವ ಕೆಲಸ ಮಾಡಬೇಕು. ಅನಸ್ತೇಶಿಯಾ ವೈದ್ಯರ ಕೊರತೆ ಇಲ್ಲಿದ್ದು, ಗುತ್ತಿಗೆ ಆಧಾರದಲ್ಲಾದರೂ ಶೀಘ್ರದಲ್ಲಿ ನೇಮಕಾತಿ ಆಗಬೇಕು. ವೈದ್ಯರು ಜನರ ತೊಂದರೆಗಳಿಗೆ ಸ್ಪಂದಿಸಬೇಕು ಎಂದರು.

ಡಿ-ಗ್ರೂಪ್ ನೌಕರರ ದೂರು:
ಇದೇ ವೇಳೆ ಸರಕಾರಿ ಆಸ್ಪತ್ರೆಯ ಡಿ-ಗ್ರೂಪ್ ನೌಕರರಿಗೆ ವೇತನ ಸಕಾಲಕ್ಕೆ ಪಾವತಿಯಾಗುತ್ತಿಲ್ಲ, ಇದರಿಂದ ತೊಂದರೆ ಉಂಟಾಗುತ್ತಿದೆ ಎಂದು ಲೋಕಾಯುಕ್ತರಲ್ಲಿ ಅಳಲು ತೋಡಿಕೊಂಡರು. ಈ ಸಂದರ್ಭ ಉತ್ತರಿಸಿದ ಲೋಕಾಯುಕ್ತರು, ಇದಕ್ಕೆ ಕಾರಣವೇನೆಂದು ತಿಳಿದುಕೊಂಡು ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭ ಬಂಟ್ವಾಳ ತಾಲೂಕು ವೈದ್ಯಾಧಿಕಾರಿ ಡಾ. ದೀಪಾ ಪ್ರಭು, ಬಂಟ್ವಾಳ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸದಾಶಿವ, ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ ಸಚಿನ್ ಕುಮಾರ್, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳಾದ ಶಿವಣ್ಣ, ಮೋಹನ್, ಲೋಕಾಯುಕ್ತ ಎಸ್ಪಿ ಎಂ.ಕೆ. ಮಾದಯ್ಯ, ಡಿವೈಎಸ್ಪಿ ಜಗದೀಶ್ ಎಂ, ಬಂಟ್ವಾಳ ಎಎಸ್ಪಿ ಸೈದುಲು ಅಡಾವತ್, ಲೋಕಾಯುಕ್ತ ಇನ್ಸ್ ಪೆಕ್ಟರ್ ಭಾರತಿ, ಲೋಕಾಯುಕ್ತ ಎಸ್ಸೈ ಚಂದ್ರಶೇಖರ್, ಸಿಬ್ಬಂದಿ ಹರಿಶ್ಚಂದ್ರ, ಬಂಟ್ವಾಳ ಎಸ್ಸೈ ಚಂದ್ರಶೇಖರ್, ಕಂದಾಯ ಇಲಾಖೆಯ ಆರ್.ಐ. ರಾಮ ಕಾಟಿಪಳ್ಳ, ಬಂಟ್ವಾಳ ಹೋಬಳಿ ಕಂದಾಯ ನಿರೀಕ್ಷಕ ನವೀನ್ ಬೆಂಜನ ಪದವು, ಸಿಬ್ಬಂದಿ ಸದಾಶಿವ ಕೈಕಂಬ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News