ಉಡುಪಿ: ಪಿಂಚಣಿದಾರರ ಸಮಾವೇಶ

Update: 2019-07-20 12:42 GMT

ಉಡುಪಿ, ಜು.20: ಪಿಂಚಣಿ ನಿವೃತ್ತ ಕಾರ್ಮಿಕರ ಹಕ್ಕು. ಇಂದಿನ ಬೆಲೆ ಏರಿಕೆಗೆ ಅನುಗುಣವಾಗಿ ನಿವೃತ್ತ ಕಾರ್ಮಿಕರ ಪಿಂಚಣಿಯನ್ನು ಕನಿಷ್ಠ 6000 ರೂ.ಗೆ ಏರಿಸಬೇಕು ಮತ್ತು ಕಾಲಕಾಲಕ್ಕೆ ಮಾರುಕಟ್ಟೆ ಬೆಲೆಗೆ ತಕ್ಕಂತೆ ತುಟ್ಟಿ ಭತ್ಯೆಯನ್ನು ನೀಡಬೇಕು ಎಂದು ಕರ್ನಾಟಕ ರಾಜ್ಯ ಭವಿಷ್ಯನಿಧಿ ಪಿಂಚಣಿ ದಾರರ ಸಂಘದ ಜತೆ ಕಾರ್ಯದರ್ಶಿ ಎಚ್.ನರಸಿಂಹ ಆಗ್ರಹಿಸಿದ್ದಾರೆ.

ಉಡುಪಿ ತಾಲೂಕು ಭವಿಷ್ಯನಿಧಿ ಪಿಂಚಣಿದಾರರ ಸಂಘ(ಸಿಐಟಿಯು) ವತಿಯಿಂದ ಶನಿವಾರ ಬನ್ನಂಜೆ ನಾರಾಯಣ ಗುರು ಸಭಾಭವನದಲ್ಲಿ ಆಯೋಜಿಸಲಾದ ಭವಿಷ್ಯನಿಧಿ ಪಿಂಚಣಿದಾರರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕೋಟ್ಯಾಧೀಶರು ಸಾಲ ಪಡೆದು ವಂಚಿಸಿ ವಿದೇಶಕ್ಕೆ ಪರಾರಿಯಾದ ಬ್ಯಾಂಕ್ ಗಳನ್ನು ಮುಳುಗಡೆಯಾಗದಂತೆ ತಡೆಯಲು ಕೇಂದ್ರ ಸರಕಾರ ಕಳೆದ ಬಜೆಟ್ ನಲ್ಲಿ 30ಸಾವಿರ ಕೋಟಿ ರೂ. ಬಿಡುಗಡೆ ಮಾಡಿದೆ. ಅದೇ ಹಣವನ್ನು ನಿವೃತ್ತಿ ಯಾದ ಕಾರ್ಮಿಕರಿಗೆ ಯಾಕೆ ಸರಕಾರ ನೀಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಕಾರ್ಮಿಕರ ಪರ ಧ್ವನಿ ಎತ್ತುವವರು ಇಂದು ಸಂಸತ್ತಿನಲ್ಲಿ ಇಲ್ಲವಾಗಿದೆ. ಆದುದರಿಂದ ನಿವೃತ್ತ ಕಾರ್ಮಿಕರು ಬೀದಿಗೆ ಇಳಿದು ಹೋರಾಟ ನಡೆಸ ಬೇಕಾಗಿದೆ ಎಂದರು.

ಕಾರ್ಮಿಕರು 40 ವರ್ಷಗಳ ಕಾಲ ದುಡಿದು ಸಂಪಾದನೆ ಮಾಡಿರುವುದಲ್ಲದೆ ಸಮಾಜಕ್ಕೂ ಕೊಡುಗೆ ನೀಡಿದ್ದಾರೆ. ಆದರೆ ನಾವು ನಿವೃತ್ತಿಯಾದಾಗ ಸಂದರ್ಭ ದಲ್ಲಿ ಅವರಿಗೆ ಸಿಗುವ ಪಿಂಚಣಿ ಭಿಕ್ಷುಕರಿಗೆಗಿಂತಲೂ ಕಡಿಮೆ. ಕಾರ್ಮಿಕರು ನಿವೃತ್ತರಾದ ಬಳಿಕ ಅವರನ್ನು ಸಾಕುವ ಜವಾಬ್ದಾರಿ ಸರಕಾರದ ಮೇಲೆ ಇದೆ. ಪಿಂಚಣಿ ಖಾತೆಯಲ್ಲಿ ಕೋಟ್ಯಂತರ ರೂ. ಅನಾಮಧೇಯ ಹಣ ಇದ್ದು, ಇದರ ಬಡ್ಡಿ ಹಣವನ್ನು ಕಾರ್ಮಿಕರ ಪಿಂಚಣಿ ಬಳಕೆ ಮಾಡಬೇಕು ಎಂದರು.

ಸಿಐಟಿಯು ಜಿಲ್ಲಾ ಅಧ್ಯಕ್ಷ ವಿಶ್ವನಾಥ ರೈ ಮಾತನಾಡಿ, ಇಂದಿನ ಬೆಲೆ ಏರಿಕೆ ದಿನಗಳಲ್ಲಿ 6000ರೂ.ಗಿಂತ ಕಡಿಮೆ ಪಿಂಚಣಿಯಲ್ಲಿ ಬದುಕು ನಡೆಸಲು ಸಾಧ್ಯ ವಾಗುವುದಿಲ್ಲ. ಸರಕಾರ ಪಿಂಚಣಿ ಖಾತೆಯಲ್ಲಿರುವ ಹಣವನ್ನು ಷೇರು ಮಾರು ಕಟ್ಟೆಯಲ್ಲಿ ತೊಡಗಿಸಿಕೊಂಡಿರುವುದು ಸರಿಯಲ್ಲ. ಇದರಿಂದ ಕಾರ್ಮಿಕರಿಗೆ ಯಾವುದೇ ಭದ್ರತೆ ದೊರೆಯುವುದಿಲ್ಲ ಎಂದು ಹೇಳಿದರು.

ಪಿಂಚಣಿ ಖಾತೆಯಲ್ಲಿರುವ ಹಣದ ಬಡ್ಡಿಯಿಂದಲೇ ಕಾರ್ಮಿಕರ ಪಿಂಚಣಿ ಯನ್ನು ಏರಿಕೆ ಮಾಡಬಹುದಾಗಿದೆ. ಆದರೆ ಸರಕಾರಕ್ಕೆ ಈ ಬಗ್ಗೆ ಯಾವುದೇ ಆಸಕ್ತಿ ಇಲ್ಲವಾಗಿದೆ. ನಿವೃತ್ತರಾಗಿರುವ ಹಿರಿಯರ ಕುರಿತ ನಿರ್ಲಕ್ಷದಿಂದಾಗಿ ಈ ನಮ್ಮ ಬೇಡಿಕೆಗಳು ಈಡೇರಿಕೆ ಆಗುತ್ತಿಲ್ಲ ಎಂದು ಅವರು ತಿಳಿಸಿದರು.

ಅಧ್ಯಕ್ಷತೆಯನ್ನು ಸಿಐಟಿಯು ತಾಲೂಕು ಅಧ್ಯಕ್ಷ ರಾಮ ಕರ್ಕಡ ವಹಿಸಿದ್ದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಶಂಕರ್, ಉಡುಪಿ ತಾಲೂಕು ಭವಿಷ್ಯನಿಧಿ ಪಿಂಚಣಿದಾರರ ಸಂಘ ಕೋಶಾಧಿಕಾರಿ ಸುಂದರಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಉಮೇಶ್ ಕುಂದರ್ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News