ಬಜ್ಪೆ-ಗುರುಪುರ-ಕೈಕಂಬ ಪರಿಸರದಲ್ಲಿ ದುರ್ವಾಸನೆ: ಎಳೆಯ ಮಕ್ಕಳ ಸಹಿತ ಗ್ರಾಮಸ್ಥರಲ್ಲಿ ಉಸಿರಾಟದ ತೊಂದರೆ

Update: 2019-07-20 13:04 GMT

ಮಂಗಳೂರು, ಜು.20: ಬಜ್ಪೆ, ಪೆರ್ಮುದೆ, ಪೆರಾರ, ಕಂದಾವರ. ಗುರುಪುರ, ಕೈಕಂಬ ಮತ್ತು ಆಸುಪಾಸಿನ ಪರಿಸರವು ದುರ್ವಾಸನೆಯಿಂದ ಕೂಡಿದ್ದು, ಎಳೆಯ ಮಕ್ಕಳ ಸಹಿತ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲದೆ ಬಹುತೇಕ ಗ್ರಾಮಸ್ಥರಲ್ಲಿ ಉಸಿರಾಟದ ತೊಂದರೆ, ತಲೆನೋವು, ಸುಸ್ತು ಕಂಡು ಬಂದಿದೆ. ಕಳೆದ ಎರಡು ದಿನದಿಂದ ಜಿಲ್ಲಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯ ಮಧ್ಯೆ ಡೆಂಗ್, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳೂ ಕಾಣಿಸಿಕೊಂಡ ಬಳಿಕ ಕೆಟ್ಟಗಾಳಿಯಿಂದಾಗಿ ಈ ಪರಿಸರದ ಜನರಲ್ಲಿ ಮತ್ತಷ್ಟು ಆತಂಕ ಉಂಟಾಗಿವೆ.

ವಿಶೇಷ ಆರ್ಥಿಕ ವಲಯ ವ್ಯಾಪ್ತಿಯ ಸುರತ್ಕಲ್, ಬೈಕಂಪಾಡಿ, ಪಣಂಬೂರು ಪರಿಸರದಲ್ಲಿ ಬೃಹತ್ ಕೈಗಾರಿಕಾ ಕಂಪೆನಿಗಳು ಕೂಡಾ ಸಾಕಷ್ಟಿದ್ದು, ಇವು ಹೊರಸೂಸುವ ಕೆಟ್ಟ ಗಾಳಿಯಿಂದಾಗಿ ದುರ್ವಾಸನೆ ಬರುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಬಜ್ಪೆ-ಗುರುಪುರ-ಕೈಕಂಬ ಪರಿಸರದಲ್ಲಿ ಸಾವಿರಾರು ಮನೆಗಳು, ವಸತಿ-ವಾಣಿಜ್ಯ ಸಂಕೀರ್ಣಗಳು, ಅಂಗನವಾಡಿ-ಶಾಲಾ-ಕಾಲೇಜುಗಳು ಹೆಚ್ಚಿನ ಸಂಖ್ಯೆಯಲ್ಲಿದೆ. ರಾತ್ರಿ-ಹಗಲೆನ್ನದೆ ಹೊರಸೂಸುವ ಕೆಟ್ಟ ಗಾಳಿಯಿಂದಾಗಿ ಈ ಭಾಗದ ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರಿಗೆ ಇದು ಭಾರೀ ಸಮಸ್ಯೆಯಾಗಿ ಪರಿಣಮಿಸಿದೆ. ಮದುವೆ ಮತ್ತಿತರ ಸಂಭ್ರಮದ ಕಾರ್ಯಕ್ರಮಕ್ಕೂ ಈ ದುರ್ವಾಸನೆ ಅಡ್ಡಿಯಾಗುತ್ತಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಅಂದಹಾಗೆ ಈ ದುರ್ವಾಸನೆಯು ವರ್ಷದ ಹಿಂದಿನಿಂದ ಲಘುಪ್ರಮಾಣದಲ್ಲಿತ್ತು. ಆದರೆ ಬರಬರುತ್ತಾ ದುರ್ವಾಸನೆ ಹೆಚ್ಚುತ್ತಾ ಬಂತು. ಕಳೆದ ಎರಡು ವಾರದಿಂದ ಇದು ವಿಪರೀತವಾಗತೊಡಗಿದ್ದು, ಇದರ ತಡೆಗಾಗಿ ಏನು ಮಾಡಬೇಕು ಎಂದು ತಿಳಿಯದೆ ಜನರು ಕಂಗಾಲಾಗಿದ್ದಾರೆ. ಕಳೆದ ಗುರುವಾರ ಬಜ್ಪೆಯ ಶಾಲೆಯೊಂದರ 10ಕ್ಕೂ ಅಧಿಕ ವಿದ್ಯಾರ್ಥಿಗಳಲ್ಲಿ ಉಸಿರಾಟದ ತೊಂದರೆ, ತಲೆನೋವು,ಹೊಟ್ಟೆ ತೊಳಸಿದಂತಹ ಅನುಭವ, ವಾಕರಿಕೆ ಕಾಣಿಸಿಕೊಂಡಿವೆ. ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಶಾಲೆಗೆ ತೆರಳಿ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಕಲಿಕೆಗೂ ಸಮಸ್ಯೆಯಾಗಿವೆ. ಇನ್ನು ಎಳೆಯ ಮಕ್ಕಳು, ಮಹಿಳೆಯರ ಸಹಿತ ಮನೆಮಂದಿಗೂ ಇದು ಭಾರೀ ಸಮಸ್ಯೆಯಾಗಿ ಕಾಣುತ್ತಿವೆ. ಎಳೆಯ ಮಕ್ಕಳ ಆರೋಗ್ಯದ ಮೇಲಂತೂ ಈ ದುರ್ವಾಸನೆ ಅಡ್ಡ ಪರಿಣಾಮ ಬೀರಿದರೆ ಅಚ್ಚರಿ ಇಲ್ಲ. 

ನನಗೆ ಈವರೆಗೆ ಸ್ಥಳೀಯರಿಂದ ಯಾವುದೇ ಲಿಖಿತ ಅಥವಾ ಮೌಖಿಕ ದೂರು ಬಂದಿಲ್ಲ. ಆದಾಗ್ಯೂ ನಾನು ಸಂಬಂಧಪಟ್ಟ ಇಲಾಖೆಯ ಗಮನ ಸೆಳೆದು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲು ಸೂಚಿಸಿ ಸೂಕ್ತ ಕ್ರಮ ಜರುಗಿಸುವೆ.
ಸಸಿಕಾಂತ್ ಸೆಂಥಿಲ್, ಜಿಲ್ಲಾಧಿಕಾರಿ ದ.ಕ.

ಜಿಲ್ಲಾಧಿಕಾರಿಯ ಸೂಚನೆಯ ಮೇರೆಗೆ ಈಗಷ್ಟೇ (ಮಧ್ಯಾಹ್ನ 1:30) ಬಜ್ಪೆ ಆಸುಪಾಸಿನ ಪರಿಸರಕ್ಕೆ ಭೇಟಿ ನೀಡಿ ಬಂದೆ. ಸದ್ಯ ಅಲ್ಲಿ ಯಾವುದೇ ದುರ್ವಾಸನೆ ಇಲ್ಲ. ಕೆಟ್ಟ ಗಾಳಿ ಅಥವಾ ದುರ್ವಾಸನೆ ಬಂದ ತಕ್ಷಣ ಮಾಹಿತಿ ನೀಡಲು ಸ್ಥಳೀಯ ಮುಖಂಡರಿಗೆ ಹೇಳಿದ್ದೇನೆ. ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ ಮತ್ತೊಮ್ಮೆ ಭೇಟಿ ನೀಡಿ ಪರಿಶೀಲಿಸುತ್ತೇವೆ.
ರಾಜಶೇಖರ್ ಪುರಾಣಿಕ್, ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ದ.ಕ.ಜಿಲ್ಲೆ

ಬಜ್ಪೆ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ದುರ್ವಾಸನೆಯ ಬಗ್ಗೆ ಮೌಖಿಕ ದೂರುಗಳು ಬಂದಿವೆ. ಆದರೆ, ಇನ್ನೂ ಯಾರೂ ಕೂಡ ಲಿಖಿತ ದೂರುಗಳು ಬಂದಿಲ್ಲ. ಗ್ರಾಮಸ್ಥರು ಲಿಖಿತ ದೂರು ಕೊಟ್ಟರೆ, ಜನಪ್ರತಿನಿಧಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನ ಸೆಳೆದು ಪರಿಹಾರಕ್ಕೆ ಪ್ರಯತ್ನಿಸಲಾಗುವುದು.
ಸಾಯೀಶ್ ಚೌಟ, ಪಿಡಿಒ ಬಜ್ಪೆ ಗ್ರಾಪಂ

ದುರ್ವಾಸನೆಯ ಬಗ್ಗೆ ಬಜ್ಪೆ ಖಾಸಗಿ ಶಾಲೆಯ ಶಿಕ್ಷಕರು ಗಮನ ಸೆಳೆದ ಮೇರೆಗೆ ನಾನು ಶಾಲೆಗೆ ತೆರಳಿ ಆರೋಗ್ಯ ತಪಾಸಣೆ ಮಾಡಿದ್ದೇನೆ. ಇದು ಎಲ್ಲಿಂದ ಹೊರ ಸೂಸುತ್ತದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೂ ಸಂಬಂಧಪಟ್ಟ ಇಲಾಖೆಗೆ ದೂರು ನೀಡಲು ಸೂಚಿಸಿದ್ದೇನೆ. ನಾನೂ ಕೂಡ ಹಿರಿಯ ಅಧಿಕಾರಿಗಳ ಗಮನ ಸೆಳೆಯುವೆ.
ಡಾ. ಚೇತನ್ ,ವೈದ್ಯಾಧಿಕಾರಿ ಬಜ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರ

ಕಳೆದ ಕೆಲವು ದಿನದಿಂದ ನಮಗೆ ಇಲ್ಲಿ ವಾಸಿಸಲು ಸಾಧ್ಯವಾಗುತ್ತಿಲ್ಲ. ಕೊಳೆತ ಮೊಟ್ಟೆ, ಸೆಗಣಿ, ಮಲ ಇತ್ಯಾದಿಯ ಮಿಶ್ರಣದ ವಾಸನೆ ಬರುತ್ತಿದೆ. ಆದರೆ, ಯಾವಾಗ ಈ ಕೆಟ್ಟ ವಾಸನೆ ಬರುತ್ತಿದೆ ಎಂದು ಹೇಳಲಿಕ್ಕಾಗದು. ಒಮ್ಮೆ ದುರ್ವಾಸನೆ ಬಂದರೆ ಕನಿಷ್ಠ ಅರ್ಧ ಗಂಟೆಯಾದರೂ ಪರಿಸರದ ಜನರ ನೆಮ್ಮದಿಗೆ ಭಂಗ ತರುತ್ತದೆ.
ಬಿ.ಎಂ. ಝಕಾರಿಯಾ, ಅಧ್ಯಕ್ಷರು ಬಜ್ಪೆ ಅನ್ಸಾರ್ ಸ್ಕೂಲ್

ಇದು ಅಪಾಯಕಾರಿ ದುರ್ವಾಸನೆಯಾಗಿದೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಎಳೆಯ ಮಕ್ಕಳ ಮೇಲೆ ಖಂಡಿತಾ ದುಷ್ಪರಿಣಾಮ ಬೀರಲಿದೆ. ಇದರ ನಿಯಂತ್ರಣಕ್ಕೆ ಏನು ಕ್ರಮ ಕೈಗೊಳ್ಳಬಹುದು ಎಂಬುದರ ಬಗ್ಗೆ ಮಸೀದಿ, ದೇವಸ್ಥಾನ, ಚರ್ಚ್‌ನ ಪ್ರಮುಖ ಹಾಗೂ ಊರವರ ಜೊತೆ ಚರ್ಚಿಸಲಾಗುವುದು.
ಇಸ್ಮಾಯೀಲ್ ಜಾವೆಲ್, ಅಧ್ಯಕ್ಷರು ಮುಹಿಯ್ಯುದ್ದೀನ್ ಜುಮಾ ಮಸ್ಜಿದ್, ಬಜ್ಪೆ

ಮೊದಲು ರಾತ್ರಿ ಹೊತ್ತು ಮಾತ್ರ ದುರ್ವಾಸನೆ ಬರುತ್ತಿತ್ತು. ನಿದ್ದೆಯಲ್ಲಿರುವುದರಿಂದ ಹೆಚ್ಚಿನವರಿಗೆ ಇದರ ದುಷ್ಪರಿಣಾಮ ಗೊತ್ತಾಗುವುದಿಲ್ಲ. ಈಗೀಗ ಹಗಲು ಹೊತ್ತೂ ದುರ್ವಾಸನೆ ಬರುತ್ತಿದೆ. ಪರಿಸರ ಗಬ್ಬೆದ್ದು ನಾರುತ್ತಿದೆ. ದುರ್ವಾಸನೆಯನ್ನು ಸಹಿಸಲು ಸಾಧ್ಯವಾಗುತ್ತಿಲ್ಲ.
ಸಲೀಂ ಹುಸೈನ್, ಕಾರ್ಯದರ್ಶಿ ಮುಹಿಯ್ಯುದ್ದೀನ್ ಜುಮಾ ಮಸ್ಜಿದ್, ಬಜ್ಪೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News