ಡೆಂಗ್, ಮಲೇರಿಯ ತಡೆಗೆ ಎಸ್‌ಎಫ್‌ಐ ಒತ್ತಾಯ

Update: 2019-07-20 13:48 GMT

ಮಂಗಳೂರು, ಜು.20: ಡೆಂಗ್, ಮಲೇರಿಯ ಮುಂತಾದ ರೋಗಗಳನ್ನು ತಡೆಗಟ್ಟಲು ಶಾಲಾ-ಕಾಲೇಜುಗಳಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ)ನ ದ.ಕ. ಜಿಲ್ಲಾ ಸಮಿತಿಯು ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.

ಎಸ್‌ಎಫ್‌ಐನ ಜಿಲ್ಲಾಧ್ಯಕ್ಷೆ ಮಾಧುರಿ ಬೋಳಾರ್ ಮಾತನಾಡಿ, ಮಂಗಳೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಡೆಂಗ್ ವ್ಯಾಪಕವಾಗಿ ಹರಡುತ್ತಿದೆ. ಡೆಂಗ್‌ಗೆ ತುತ್ತಾಗಿ ಶುಕ್ರವಾರ ಮಂಗಳೂರು ನಗರದ ಖಾಸಗಿ ಶಾಲೆಯಲ್ಲಿ ಕಲಿಯುವ 7ನೇ ತರಗತಿಯ ವಿದ್ಯಾರ್ಥಿನಿ ಡೆಂಗ್‌ಗೆ ಬಲಿಯಾಗಿದ್ದಾಳೆ. ಹಾಗಾಗಿ ಜನರು ಡೆಂಗ್ ಹಾವಳಿಯಿಂದ ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜನರಿಗೆ ಡೆಂಗ್ ಹರಡದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಯ ಕ್ರಮಗಳನ್ನು ತಿಳಿಸುವ ಅಗತ್ಯವಿದೆ. ಆ ಕೆಲಸ ಈಗಾಗಲೇ ನಡೆಯುತ್ತಿದೆಯಾದರೂ, ಜಿಲ್ಲೆಯೆಲ್ಲೆಡೆ ಇರುವ ಶಾಲಾ-ಕಾಲೇಜುಗಳಲ್ಲಿ ಈ ಕುರಿತು ಜಾಗೃತಿ ಅಭಿಯಾನ ನಡೆಸುವ ಅಗತ್ಯವಿದೆ ಎಂದರು.

ಜಿಲ್ಲೆಯ ಹಲವು ಶಾಲಾ-ಕಾಲೇಜುಗಳಲ್ಲಿ ಅಲ್ಲಲ್ಲಿ ನೀರು ನಿಂತಿರುವುದು ಕಂಡುಬಂದಿದೆ. ಮಂಗಳೂರು ನಗರದ ಬಲ್ಮಠದ ಸರಕಾರಿ ಮಹಿಳಾ ಕಾಲೇಜಿನಲ್ಲಿ ಮೈದಾನ ಮಳೆನೀರಿನಿಂದ ತುಂಬಿಕೊಂಡಿದೆ. ವಿದ್ಯಾರ್ಥಿನಿಯರಿಗೆ ಅಲ್ಲಿ ನಡೆಯಲೂ ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿ ಜಿಲ್ಲೆಯ ಹಲವು ಶಾಲಾ-ಕಾಲೇಜುಗಳಲ್ಲಿವೆ ಎಂದು ಸಮಸ್ಯೆಗಳನ್ನು ಮಾಧುರಿ ಬೋಳಾರ್ ಅಪರ ಜಿಲ್ಲಾಧಿಕಾರಿ ಎದುರು ಬಿಚ್ಚಿಟ್ಟರು.

ಈ ಸಂದರ್ಭ ಎಸ್‌ಎಫ್‌ಐನ ಜಿಲ್ಲಾ ಕಾರ್ಯದರ್ಶಿ ವಿಕಾಸ್ ಕುತ್ತಾರ್, ಜಿಲ್ಲಾ ಉಪಾಧ್ಯಕ್ಷ ಸಿನಾನ್ ಬೆಂಗ್ರೆ, ಜಿಲ್ಲಾ ಸಮಿತಿ ಸದಸ್ಯರಾದ ತಿಲಕ್ ಕುತ್ತಾರ್, ಸೋಮೇಶ್ ಪಂಜಿಮೊಗರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News