ಆನ್‌ಲೈನ್ ಆಟಕ್ಕಾಗಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ

Update: 2019-07-20 14:26 GMT

ಪುಣೆ,ಜು.20: 20ರ ಹರೆಯದ ಬಿ.ಕಾಂ ವಿದ್ಯಾರ್ಥಿ ಬ್ಲೂವೇಲ್ ರೀತಿಯ ಆನ್‌ಲೈನ್ ಆಟದ ಗುರಿಯನ್ನು ಪೂರ್ಣಗೊಳಿಸುವ ಧಾವಂತದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುಣೆಯ ಲೊನಿಕಂಡ್‌ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ವಿದ್ಯಾರ್ಥಿಯನ್ನು ಲೊನಿಕಂಡ್ ನಿವಾಸಿ ದಿವಾಕರ್ ಮಲಿಯ ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೂ ಮೊದಲು ಚೀಟಿ ಬರೆದಿರುವ ಯುವಕ, “ಪಂಜರದೊಳಗಿದ್ದ ಕರಿ ಚಿರತೆ ಈಗ ಹೊರಬಂದಿದೆ ಮತ್ತು ಅದಕ್ಕಿನ್ನೂ ಯಾವುದೇ ನಿರ್ಬಂಧಗಳಿಲ್ಲ. ದಿ ಎಂಡ್” ಎಂದು ಬರೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂದೇಶ ಬಹುಶಃ ಆತನ ಕಾರ್ಯವನ್ನು ಶ್ಲಾಘಿಸುವ ಉದ್ದೇಶದಿಂದ ಬರೆದಿರಬಹುದು ಮತ್ತು ಅದರಲ್ಲಿ ಮಲಿಯ ತನ್ನನ್ನು ಕರಿ ಚಿರತೆ ಎಂದು ಸಂಬೋಧಿಸಿದ್ದಾನೆ ಎಂದು ಪೊಲೀಸರು ಅನುಮಾನಿಸಿದ್ದಾರೆ.

ಮರಾಠಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಬರೆಯಲಾಗಿರುವ ಪತ್ರದಲ್ಲಿ ಕರಿ ಚಿರತೆಯ ಚಿತ್ರ ಬಿಡಿಸಲಾಗಿದ್ದು, ಅದರ, ಕೆಳಗೆ ಸೂರ್ಯ ಮತ್ತೊಮ್ಮೆ ಉದಯಿಸಲಿದ್ದಾನೆ ಎಂದು ಬರೆಯಲಾಗಿದೆ.

ಬಿಜೆಎಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಮಲಿಯ ಸ್ಮಾರ್ಟ್‌ಫೋನ್‌ನಲ್ಲಿ ಹೆಚ್ಚಾಗಿ ತೊಡಗಿಕೊಂಡಿದ್ದ. ಆತ ನಮ್ಮ ಕರೆಯನ್ನು ಸ್ವೀಕರಿಸದಿದ್ದಾಗ ಘಟನೆಯ ಬಗ್ಗೆ ನಮಗೆ ಅರಿವಿಗೆ ಬಂದಿದೆ ಎಂದು ಮಲಿಯ ಹೆತ್ತವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News