ಮಂಗಳೂರು: 10 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Update: 2019-07-20 15:43 GMT

ಮಂಗಳೂರು, ಜು.20: ಪಣಂಬೂರು ಪೆಟ್ರೋಲ್ ಬಂಕ್ ಬಳಿ ನಡೆದ ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪಣಂಬೂರು ಪೊಲೀಸರು ಶನಿವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಒಂಟಿಯಂಗಡಿ ನಿವಾಸಿ, ಚಾಲಕ ಎಸ್.ಅಚ್ಯುತ್ (35) ಬಂಧಿತ ಆರೋಪಿ.

ಪ್ರಕರಣ ವಿವರ: 2008ರಲ್ಲಿ ಪಣಂಬೂರು ಪೆಟ್ರೋಲ್ ಬಂಕ್ ಸಮೀಪ ನಡೆದ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಆರೋಪಿ ಕಾರಣೀಕರ್ತನಾಗಿದ್ದ ಎಂದು ಆರೋಪಿಸಲಾಗಿತ್ತು. 2009ರ ಮಾರ್ಚ್ 6ರಂದು ಮಂಗಳೂರು ಜೆಎಂಎಫ್‌ಸಿ 2ನೇ ನ್ಯಾಯಾಲಯವು ಆರೋಪಿಗೆ ಆರು ತಿಂಗಳ ಸಜೆ ಹಾಗೂ ಐದು ಸಾವಿರ ದಂಡ ತೆರಲು ತೀರ್ಪು ನೀಡಿತ್ತು.

ನ್ಯಾಯಾಲಯದ ತೀರ್ಪಿನ ಬಳಿಕ ಆರೋಪಿ ಚಾಲಕ ಎಸ್.ಅಚ್ಯುತ್ ತಲೆಮರೆಸಿಕೊಂಡಿದ್ದ. ನ್ಯಾಯಾಲಯವು ಆರೋಪಿಯನ್ನು ಬಂಧಿಸಲು ವಾರಂಟ್ ಹೊರಡಿಸಿತ್ತು. ಆರೋಪಿಯ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿ, ಕಾರ್ಯಾಚರಣೆ ನಡೆಸಿ ಕಾವೂರಿನಲ್ಲಿ ಪಣಂಬೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನಿರ್ದೇಶನದಂತೆ ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀಗಣೇಶ್, ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಶ್ರೀನಿವಾಸ್‌ಗೌಡ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಣಂಬೂರು ಠಾಣಾ ಇನ್‌ಸ್ಪೆಕ್ಟರ್ ಅಜ್ಮತ್ ಅಲಿ, ಪಿಎಸ್ಸೈ ಉಮೇಶ್‌ಕುಮಾರ್, ಸಿಬ್ಬಂದಿ ಶೈಲೇಂದ್ರ ಕೆ. ಮತ್ತು ರಾಧಾಕೃಷ್ಣ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News