ತೀವ್ರ ಮಳೆ: ಕೇರಳದ ಏಳು ಮೀನುಗಾರರು ನಾಪತ್ತೆ

Update: 2019-07-20 16:19 GMT

ತಿರುವನಂತಪುರಂ, ಜು.20: ಕೇರಳದ ಹಲವು ಭಾಗಗಳಲ್ಲಿ ಕಳೆದ ಮೂರು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆ ಶನಿವಾರ ಮತ್ತಷ್ಟು ತೀವ್ರಗೊಂಡಿದ್ದು, ರಾಜ್ಯದ ಏಳು ಮೀನುಗಾರರು ನಾಪತ್ತೆಯಾಗಿರುವ ವರದಿಯಾಗಿದೆ.

ರಾಜ್ಯದಲ್ಲಿ ಮಳೆಯ ಅಬ್ಬರ ಇನ್ನಷ್ಟು ತೀವ್ರವಾಗಲಿದ್ದು ಕೆಲವು, ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ತೀವ್ರ ಮಳೆಯ ಹಿನ್ನೆಲೆಯಲ್ಲಿ ರಾಜ್ಯದ ನಾಲ್ಕು ಅಣೆಕಟ್ಟುಗಳ ದ್ವಾರಗಳನ್ನು ತೆರೆಯಲಾಗಿದೆ. ರಾಜ್ಯಾದ್ಯಂತ ಸರಕಾರ ನೂರಾರು ಪರಿಹಾರ ಶಿಬಿರಗಳನ್ನು ಸ್ಥಾಪಿಸಿದೆ. ನಾಪತ್ತೆಯಾದ ಮೀನುಗಾರರ ಪೈಕಿ ಮೂವರು ಕೊಲ್ಲಂನ ನೀಂದಕರ ಜಿಲ್ಲೆಗೆ ಸೇರಿದವರಾದರೆ ಉಳಿದವರು ತಿರುವನಂತಪುರಂನ ವಿಳಿಂಜಮ್‌ನವರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಣೆಕಟ್ಟುಗಳಲ್ಲಿ ನೀರು ಸಾಮರ್ಥ್ಯ ಮಟ್ಟಕ್ಕಿಂತ ಹೆಚ್ಚು ಏರಿಕೆಯಾಗುವ ಭೀತಿ ಎದುರಾಗಿದ್ದು ಈ ಹಿನ್ನೆಲೆಯಲ್ಲಿ ಇಡುಕ್ಕಿಯಲ್ಲಿರುವ ಮಲಂಕರ ಅಣೆಕಟ್ಟಿನ ಎರಡು ದ್ವಾರಗಳು, ಎರ್ನಾಕುಲಂ ಜಿಲ್ಲೆಯಲ್ಲಿರುವ ಭೂತತಂಕೆಟ್ಟು ಅಣೆಕಟ್ಟಿನ ಒಂಬತ್ತು ದ್ವಾರಗಳು ಮತ್ತು ಕಲ್ಲರ್ಕುಟ್ಟಿ ಮತ್ತು ಪಂಬ ಅಣೆಕಟ್ಟಿನ ತಲಾ ಒಂದು ದ್ವಾರವನ್ನು ತೆರೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕರಾವಳಿ ಪ್ರದೇಶದಲ್ಲಿನ ಸಾವಿರಾರು ನಿವಾಸಿಗಳನ್ನು ತೆರವುಗೊಳಿಸಿ ಪರಿಹಾರ ಶಿಬಿರಗಳಿಗೆ ಕಳುಹಿಸಲಾಗಿದೆ. ಕಣ್ಣೂರಿನಲ್ಲಿ ಹನಿಕಡಿಯದೆ ಸುರಿಯುತ್ತಿರುವ ಮಳೆಯಿಂದಾಗಿ ತವಕ್ಕರ ರೈಲು ನಿಲ್ದಾಣದ ಬಳಿಯಿರುವ ಮನೆಗಳ ಒಳಗೆ ನೀರು ತುಂಬಿದ್ದು ಅಲ್ಲಿನ ನಿವಾಸಿಗಳನ್ನು ಪರಿಹಾರ ಶಿಬಿರಗಳಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News