ಮಂಗಳೂರು: ನಿರ್ಮಾಣ ಹಂತದ ಅಪಾರ್ಟ್‌ಮೆಂಟ್ ತಡೆಗೋಡೆ ಕುಸಿತ

Update: 2019-07-20 16:21 GMT

ಮಂಗಳೂರು, ಜು.20: ಕರಾವಳಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಉರ್ವಸ್ಟೋರ್ ಬಳಿ ನಿರ್ಮಾಣ ಹಂತದ ಅಪಾರ್ಟ್‌ಮೆಂಟ್‌ವೊಂದರ ತಡೆಗೋಡೆ ಶನಿವಾರ ಕುಸಿದು ಬಿದ್ದಿದ್ದು, 50ಕ್ಕೂ ಅಧಿಕ ಕಾರ್ಮಿಕರು ಪಾರಾಗಿದ್ದಾರೆ. ಈ ಮೂಲಕ ಸಂಭವನೀಯ ದುರಂತವೊಂದು ತಪ್ಪಿದಂತಾಗಿದೆ.

ಉರ್ವಸ್ಟೋರ್ ಆಕಾಶವಾಣಿ ಕ್ವಾಟ್ರರ್ಸ್‌ನ ಹಿಂಬದಿಯಲ್ಲಿ ಅಪಾರ್ಟ್‌ಮೆಂಟ್‌ವೊಂದು ನಿರ್ಮಾಣವಾಗುತ್ತಿದೆ. ಈ ವಸತಿ ಸಂಕೀರ್ಣದಲ್ಲಿ ಸುಮಾರು 10ರಿಂದ 12 ಮೀಟರ್ ಎತ್ತರ ಮತ್ತು 60 ಮೀಟರ್ ಅಗಲ ತಡೆಗೋಡೆ ನಿರ್ಮಿಸಲಾಗುತ್ತಿದೆ. ಗುರುವಾರದಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆಯಿಂದ ತಡೆಗೋಡೆ ಹಿಂದಿನ ಮಣ್ಣು ಹದಗೊಂಡು ತಡೆಗೋಡೆ ಕುಸಿದು ಸಂಪೂರ್ಣ ಧರಾಶಾಹಿಯಾಗಿದೆ.

ಅಪಾರ್ಟ್‌ಮೆಂಟ್‌ನ ತಡೆಗೋಡೆ ಮತ್ತಷ್ಟು ಕುಸಿಯದಂತೆ ಮರಳು ಗೋಣಿಗಳನ್ನು ಇಡಲಾಗುತ್ತಿದೆ. ಬೆಳಗ್ಗೆ 11:30ರ ವೇಳೆಗೆ ತಡೆಗೋಡೆ ಮೆಲ್ಲನೆ ವಾಲಿಕೊಳ್ಳಲು ಆರಂಭವಾಯಿತು. ಇದನ್ನು ನೋಡಿದ ಕಾರ್ಮಿಕರು ಭಯದಿಂದ ಓಡಿಹೋದ ಪರಿಣಾಮ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಅಪಾರ್ಟ್‌ಮೆಂಟ್‌ನ ದಕ್ಷಿಣ ಭಾಗದಲ್ಲಿ ಸುಮಾರು ಎರಡು ಎಕರೆ ಆಕಾಶವಾಣಿ ಕ್ವಾಟ್ರರ್ಸ್‌ನ ಜಾಗವಿದ್ದು, ತಡೆಗೋಡೆ ಕುಸಿದ ಪರಿಣಾಮ ಕ್ವಾಟ್ರರ್ಸ್‌ಗಳು ಅಪಾಯದಲ್ಲಿವೆ. ಒಂದು ವೇಳೆ ತಡೆಗೋಡೆಯ ಮಣ್ಣು ಮತ್ತಷ್ಟು ಕುಸಿತಗೊಂಡರೆ ಕ್ವಾಟ್ರರ್ಸ್‌ಗಳಿಗೆ ಮತ್ತಷ್ಟು ಸಮಸ್ಯೆಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News