ಚುನಾವಣಾ ಜಾಗೃತಿ ಪೋಸ್ಟರ್‌ ಗಳಲ್ಲಿ ನಿರ್ಭಯಾ ಅತ್ಯಾಚಾರಿಯ ಚಿತ್ರ !

Update: 2019-07-20 16:31 GMT

ಚಂಡಿಗಢ, ಜು. 20: ಪಂಜಾಬ್ ಚುನಾವಣಾ ಆಯೋಗ ಹೊಶಿಯಾರ್‌ಪುರದಲ್ಲಿ ನಡೆಸಿದ ಚುನಾವಣಾ ಜಾಗೃತಿ ಅಭಿಯಾನದ ಸಂದರ್ಭ ಬ್ಯಾನರ್ ಹಾಗೂ ಪೋಸ್ಟರ್‌ ಗಳಲ್ಲಿ ಪ್ರಮುಖ ಸೆಲೆಬ್ರೆಟಿಗಳ ಜೊತೆಗೆ ನಿರ್ಭಯ ಅತ್ಯಾಚಾರ ಪ್ರಕರಣದ ದೋಷಿಯ ಭಾವಚಿತ್ರ ಹಾಕಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.

ಈ ಭಾವಚಿತ್ರ ಇರುವ ಬ್ಯಾನರ್ ಹಾಗೂ ಪೋಸ್ಟರ್‌ಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು, ಬಳಕೆದಾರರು ಆಡಳಿತದ ಬೇಜವಾಬ್ದಾರಿ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ.

ಬ್ಯಾನರ್ ಹಾಗೂ ಪೋಸ್ಟರ್‌ಗಳಲ್ಲಿ ನಿರ್ಭಯಾ ಅತ್ಯಾಚಾರ ಪ್ರಕರಣದ ದೋಷಿಯಾಗಿರುವ ಮುಖೇಶ್ ಸಿಂಗ್‌ನ ಭಾವಚಿತ್ರ ಬಳಸಲಾಗಿದೆ.

ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಮುಖೇಶ್ ಸಿಂಗ್‌ನೊಂದಿಗೆ ಇತರ ನಾಲ್ವರಿಗೆ ದಿಲ್ಲಿ ನ್ಯಾಯಾಲಯ ಮರಣದಂಡನೆ ವಿಧಿಸಿ ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿ ದೋಷಿಗಳು ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದರು. ಆದರೆ, ಅವರ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು.

ಪ್ರಮಾದದಿಂದ ಇದು ಸಂಭವಿಸಿದೆ ಎಂದು ಹೇಳಿರುವ ಪಂಜಾಬ್ ಕೈಗಾರಿಕೆ ಹಾಗೂ ವಾಣಿಜ್ಯ ಸಚಿವ ಸುಂದರ್ ಶ್ಯಾಮ್ ಅರೋರಾ, ಈ ಕೃತ್ಯದ ಹಿಂದೆ ಯಾರಿದ್ದಾರೆ ಎಂದು ತನಿಖೆ ನಡೆಸಲಾಗುವುದು ಎಂದಿದ್ದಾರೆ.

‘‘ಈತ ನಿರ್ಭಯಾ ಅತ್ಯಾಚಾರ ಪ್ರಕರಣದ ದೋಷಿ ಎಂದು ಬರೆದಿಲ್ಲ, ಆದುದರಿಂದ. ಭಾವಚಿತ್ರವನ್ನು ತಪ್ಪಾಗಿ ಗುರುತಿಸಿರುವುದರಿಂದ ಇದು ಸಂಭವಿಸಿದೆ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News