ಅಧಿಕಾರದಾಹಿ ಬಿಜೆಪಿಯಿಂದ ಪ್ರಜಾಪ್ರಭುತ್ವ ವಿರೋಧಿ ವರ್ತನೆ: ಬಾಲಕೃಷ್ಣ ಶೆಟ್ಟಿ

Update: 2019-07-20 16:47 GMT

ಉಡುಪಿ, ಜು.20: ರಾಜ್ಯಪಾಲರು, ರಾಜ್ಯಪಾಲರ ಕಚೇರಿಯ ದುರು ಪಯೋಗ ಮತ್ತು ಶಾಸಕರ ಖರೀದಿ ಕ್ರಮವನ್ನು ವಿರೋಧಿಸಿ ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಶನಿವಾರ ಅಜ್ಜರಕಾಡು ಹುತಾತ್ಮ ಸ್ಮಾರಕರದ ಎದುರು ಧರಣಿ ಹಮ್ಮಿಕೊಳ್ಳಲಾಗಿತ್ತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಪಿಐಎಂ ಉಡುಪಿ ಜಿಲ್ಲಾ ಕಾರ್ಯ ದರ್ಶಿ ಬಾಲಕೃಷ್ಣ ಶೆಟ್ಟಿ, ತೀವ್ರ ಅಧಿಕಾರ ದಾಹ ಹಾಗೂ ಪ್ರಜಾತಂತ್ರ ವಿರೋಧಿ ಪ್ರಯತ್ನದ ಭಾಗವಾಗಿ ಬಿಜೆಪಿ, ಕೇಂದ್ರ ಸರಕಾರದ ಅಧಿಕಾರ ಮತ್ತು ರಾಜ್ಯ ಪಾಲರ ಕಛೇರಿಯನ್ನು ದುರುಪಯೋಗಪಡಿಸಿಕೊಂಡು ರಾಜ್ಯದ ಮೈತ್ರಿ ಸರಕಾರವನ್ನು ಉರುಳಿಸುವ ಕೆಲಸ ಮಾಡುತ್ತಿದೆ. ಪ್ರಜಾಪ್ರಭುತ್ವ ವಿರೋಧಿ ಬಿಜೆಪಿಗೆ ರಾಜ್ಯದ ಜನತೆ ಸರಿಯಾದ ಪಾಠ ಕಲಿಸಬೇಕೆಂದು ಹೇಳಿದರು.

ಬಿಜೆಪಿ ಮತ್ತು ಕೇಂದ್ರ ಸರಕಾರ ತಕ್ಷಣವೇ ಇಂತಹ ಪ್ರಜಾಪ್ರಭುತ್ವ ವಿರೋಧಿ ಕೆಲಸಗಳನ್ನು ನಿಲ್ಲಿಸಬೇಕು. ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ಸೂಚನೆ ನೀಡುತ್ತಿರುವುದು ಸದನದ ಸದಸ್ಯರ ಚರ್ಚಿಸುವ ಹಕ್ಕಿನ ಮೇಲಿನ ದಮನ ಆಗಿದೆ. ಸದನವನ್ನು ನಡೆಸುವ ಸ್ಪೀಕರ್‌ರವರು ಕೈಗೊಳ್ಳಬೇಕಾದ ನಿಯಮಾವಳಿ ಗಳ ಉಲ್ಲಂಘನೆಗೆ ಅವಕಾಶ ನೀಡಲಿದೆ ಎಂದು ಅವರು ತಿಳಿಸಿದರು.

ರಾಜ್ಯದ ಶಾಸಕರು ಮತ್ತು ವಿರೋಧ ಪಕ್ಷ ಬಿಜೆಪಿ, ವಿಧಾನಸಭಾ ಅಧಿವೇಶನ ದಲ್ಲಿ ರಚನಾತ್ಮಕ ಚರ್ಚೆಯಲ್ಲಿ ತೊಡಗಿ ಜನತೆಗೆ ಸರಿಯಾದ ಪರಿಹಾರ ಹುಡುಕಬೇಕಾದ ಸಂದರ್ಭದಲ್ಲಿ, ಜನಪರವಾದ ಈ ಕೆಲಸವನ್ನು ತೀವ್ರವಾಗಿ ಕಡೆಗಣಿಸಿ, ಕೇವಲ ಅಧಿಕಾರದಾಹಿ ಮನೋಭಾವದಿಂದ ಮೈತ್ರಿ ಸರಕಾರವನ್ನು ಅಸ್ಥಿರಗೊಳಿಸುವ ಬೆಳವಣಿಗೆ ತೀವ್ರ ನಾಚಿಕೆಗೇಡು ಎಂದು ಬಾಲಕೃಷ್ಣ ಶೆಟ್ಟಿ ಆರೋಪಿಸಿದರು.

ಸಿಐಟಿಯು ಜಿಲ್ಲಾಧ್ಯಕ್ಷ ವಿಶ್ವನಾಥ ರೈ, ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ.ಶಂಕರ್, ಉಡುಪಿ ತಾಲೂಕು ಕಾರ್ಯದರ್ಶಿ ಶಶಿಧರ ಗೊಲ್ಲ, ತಾಲೂಕು ಸಮಿತಿ ಸದಸ್ಯರಾದ ಕವಿರಾಜ್, ಉಮೇಶ್ ಕುಂದರ್, ನಳಿನಿ, ಕೆ.ಲಕ್ಷ್ಮಣ್, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಎಚ್. ನರಸಿಂಹ, ಮಹಾಬಲ ವಡೇರಹೋಬಳಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News