ಮಣಿಪಾಲ ಬೀದಿ ನಾಯಿಗಳ ಹತ್ಯೆ ಪ್ರಕರಣ ತನಿಖೆ ಚುರುಕು, ಆರೋಪಿಗಳ ಪತ್ತೆಗೆ ಆಗ್ರಹಿಸಿ ಧರಣಿ

Update: 2019-07-20 16:55 GMT

ಮಣಿಪಾಲ, ಜು.20: ಜಿಲ್ಲಾಧಿಕಾರಿ ಕಚೇರಿ ರಸ್ತೆಯ ವಸತಿ ಸಮುಚ್ಛಯ ವೊಂದರ ಎದುರು ಒಟ್ಟು 8 ಬೀದಿ ನಾಯಿಗಳನ್ನು ವಿಷ ಉಣಿಸಿ ಸಾಯಿಸಿರುವ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿ, ಆರೋಪಿಗಳನ್ನು ಕೂಡಲೇ ಪತ್ತೆ ಹಚ್ಚುವಂತೆ ಒತ್ತಾಯಿಸಿ ಮಲ್ಪೆಯ ಮಧ್ವರಾಜ್ ಅನಿಮಲ್ ಕೇರ್ ಟ್ರಸ್ಟ್‌ನ ನೇತೃತ್ವದಲ್ಲಿ ಶನಿವಾರ ಮಣಿಪಾಲ ಪೊಲೀಸ್ ಠಾಣೆಯ ಎದುರು ಧರಣಿ ನಡೆಸಲಾಯಿತು.

ಟ್ರಸ್ಟ್‌ನ ಸ್ಥಾಪಕ ಟ್ರಸ್ಟಿ ಬಬಿತಾ ರಾಜ್ ಮಾತನಾಡಿ, ಬೀದಿನಾಯಿಗಳ ಮಾರಣಹೋಮದಂತಹ ಅಪರಾಧವು ಗಂಭೀರ, ಕಾನೂನು ಬಾಹಿರ ಹಾಗೂ ಅಮಾನವೀಯವಾಗಿದ್ದು, ಇಡೀ ಸಮುದಾಯ ನಾಚಿಕೆ ಪಡುವಂತಾಗಿದೆ. ಸಾಮಾನ್ಯವಾಗಿ ನಾಯಿಗಳಿಗೆ ಧ್ವನಿಯೇ ಇಲ್ಲ. ಸತ್ತ ನಂತರ ಅದನ್ನು ಕೇಳುವವರೇ ಇರುವುದಿಲ್ಲ. ಧ್ವನಿ ಇಲ್ಲದ ಇಂತಹ ಬೀದಿನಾಯಿಗಳಿಗೆ ಧ್ವನಿಯಾಗಿ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.

ಈ ಘಟನೆ ಸಂಭವಿಸಿ 28 ದಿನಗಳಾದರೂ ಈವರೆಗೆ ಪೊಲೀಸ್ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ. ಈಗ ನಡೆದಿರುವ ಕೃತ್ಯದ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ ಮುಂದೆ ನಿರಂತರವಾಗಿ ಇಂತಹ ಕೃತ್ಯಗಳು ನಡೆಯುವ ಸಾಧ್ಯತೆಗಳು ಇರುತ್ತವೆ. 15 ದಿನಗಳೊಳಗೆ ಆರೋಪಿಗಳ ಪತ್ತೆ ಹಚ್ಚುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. ನಮಗೆ ನ್ಯಾಯ ಸಿಗದಿದ್ದರೆ ಹೋರಾಟವನ್ನು ಮುಂದುವರೆಸಲಾಗುವುದು ಎಂದು ಹೇಳಿದರು.

ಖಾಸಗಿ ಜಾಗದಲ್ಲಿ ಈ ರೀತಿಯ ಕೃತ್ಯವನ್ನು ಹೊರಗಿನವರು ಬಂದು ಮಾಡಲು ಸಾಧ್ಯವಿಲ್ಲ. ಅಲ್ಲದೆ ಕೊಂದ ನಾಯಿಗಳ ಕಳೇಬರವನ್ನು ಅವರೇ ಸಾಗಿಸಿದ್ದಾರೆ. ಇದೆಲ್ಲವನ್ನು ಹೊರಗಿನಿಂದ ಬಂದವರು ಮಾಡುವ ಧೈರ್ಯ ತೋರುವುದಿಲ್ಲ. ಹೀಗಾಗಿ ಪೊಲೀಸರು ಸಮಗ್ರವಾಗಿ ತನಿಖೆ ಮಾಡಿದರೆ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಿದೆ. ಈ ಬಗ್ಗೆ ಜಿಲ್ಲಾಧಿಕಾರಿ, ಎಸ್ಪಿ, ಶಾಸಕರು ಗಳಿಗೂ ಮನವಿ ಸಲ್ಲಿಸಲಾಗುವುದು ಎಂದರು.

ಮಣಿಪಾಲದ ಕ್ಯಾಪ್ಟನ್ ಅನಿಮಲ್ ಕೇರ್ ಟ್ರಸ್ಟ್‌ನ ಡಾ.ಶುಭಗೀತ ಮಾತ ನಾಡಿ, ಬೀದಿ ನಾಯಿಗಳಿಗೆ ವಿಷ ಹಾಕಿ ಕೊಂದಿರುವುದು ಅಕ್ಷಮ್ಯ ಅಪರಾಧ ವಾಗಿದೆ. ಈ ನಾಯಿಗಳು ಯಾರಿಗೂ ತೊಂದರೆ ಕೊಡುತ್ತಿರಲಿಲ್ಲ. ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಲು ನಾವೇ ಕಾರಣ. ಎಲ್ಲೆಂದರಲ್ಲಿ ಎಸೆಯುವ ತ್ಯಾಜ್ಯದಿಂದಾಗಿ ನಾಯಿಗಳ ಸಂಖ್ಯೆ ಏರಿಕೆಯಾಗುತ್ತಿದೆ. ಈಗ ಅದೇ ಜನ ಅದೇ ನಾಯಿಗಳನ್ನು ಕೊಂದು ಹಾಕುತ್ತಿದ್ದಾರೆ ಎಂದು ತಿಳಿಸಿದರು.

ಸರಕಾರ ಬೀದಿನಾಯಿಗಳ ಪೋಷಣೆಗಾಗಿ ಜಾಗವನ್ನು ಮೀಸಲಿರಿಸಬೇಕು. ಇಲ್ಲಿ ಶಸ್ತ್ರಚಿಕಿತ್ಸೆ ಮಾಡಿ ನಾಯಿಗಳನ್ನು ಬಿಟ್ಟರೆ, ಕ್ರಮೇಣ ಬೀದಿನಾಯಿಗಳ ಸಂಖ್ಯೆ ಕಡಿಮೆಯಾಗುತ್ತದೆ. ಈ ಕುರಿತು ಸರಕಾರ ಚಿಂತನೆ ಮಾಡಬೇಕು. ಇದರ ಉಸ್ತುವಾರಿಯನ್ನು ವಹಿಸಿಕೊಳ್ಳಲು ಸಾಕಷ್ಟು ಸಂಘಸಂಸ್ಥೆಗಳು ಮುಂದೆ ಬರುತ್ತವೆ ಎಂದರು.

ಬಳಿಕ ಈ ಕುರಿತ ಮನವಿಯನ್ನು ಮಣಿಪಾಲ ಪೊಲೀಸ್ ಠಾಣೆಯ ಪ್ರಭಾರ ನಿರೀಕ್ಷಕ ಸಂಪತ್ ಕುಮಾರ್ ಅವರಿಗೆ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಅವರು, ಈ ಕುರಿತು ತನಿಖೆ ನಡೆಯುತ್ತಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕ್ಯಾಪ್ಟನ್ ಅನಿಮಲ್ ಕೇರ್ ಟ್ರಸ್ಟ್‌ನ ಡಾ.ಸುಹಾಸ್ ಭಟ್, ಗಾಯತ್ರಿ, ಶ್ವೇತಾ, ಅಲ್ಕಾ, ಶ್ರೇಯ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News