ವರ್ತಮಾನದ ಪ್ರತಿಬಿಂಬ ‘ನಮ್ಮ ನಿಮ್ಮೊಳಗೆ’: ಡಾ.ಪಿ.ಎಸ್. ಎಡಪಡಿತ್ತಾಯ

Update: 2019-07-20 17:09 GMT

ಮಂಗಳೂರು, ಜು.20: ಎರಡು ಮನಸುಗಳು ಸಂವಹನ ನಡೆಸುವಾಗ ಮೂರನೇ ಆಕೃತಿ ಸೃಷ್ಟಿಯಾಗುತ್ತದೆ. ಅಂತಹ ಕೃತಿಯೇ ಈ ‘ನಮ್ಮ ನಿಮ್ಮೊಳಗೆ’. ಇದು ಪ್ರಸ್ತುತ ಸಮಾಜದ ಆಗುಹೋಗುಗಳನ್ನು ಪ್ರತಿಬಿಂಬಿಸುತ್ತದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಪಿ.ಎಸ್. ಯಡಪಡಿತ್ತಾಯ ತಿಳಿಸಿದರು.

ನಗರದ ಮಂಗಳೂರು ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ಲೇಖಕ ಡಾ.ವಸಂತಕುಮಾರ್ ಪೆರ್ಲ ಅವರ ಚಿಂತನ ಬರಹಗಳ ಸಂಗ್ರಹ ‘ನಮ್ಮ ನಿಮ್ಮೊಳಗೆ’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಡಾ.ಪಿ. ದಯಾನಂದ ಪೈ- ಪಿ.ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕಿ ಡಾ.ನಾಗವೇಣಿ ಮಂಚಿ ಮಾತನಾಡಿ, ಕೃತಿಯು ಎಳೆಯರ ಬಗೆಗಿನ ಕಾಳಜಿ, ಹದಿಹರೆಯದವರ ಚಿಂತನೆ, ಗೃಹಸ್ಥರ ದಿನಚರಿ, ವೃದ್ಧಾಪ್ಯದ ಜೀವನವನ್ನು ಚಿತ್ರಿಸುವ ಉತ್ತಮ ಸಮುಚ್ಛಯವಾಗಿದೆ ಎಂದು ಹೇಳಿದರು.

ಲೇಖಕ ಡಾ.ವಸಂತಕುಮಾರ್ ಪೆರ್ಲ ಮಾತನಾಡಿ, ‘ನಮ್ಮ ನಿಮ್ಮೊಳಗೆ’ ಎನ್ನುವುದು ಏಕಾಂತ ಮತ್ತು ಲೋಕಾಂತವನ್ನು ಪ್ರತಿಬಿಂಬಿಸುವ ಪ್ರಯತ್ನವಾಗಿದೆ ಎಂದರು.

ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಡಾ.ಉದಯಕುಮಾರ ಎಂ.ಎ ಮುಖ್ಯ ಅತಿಥಿಯಾಗಿದ್ದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ರತ್ನಾವತಿ ಸ್ವಾಗತಿಸಿದರು. ಡಾ.ನಾಗವೇಣಿ ಮಂಚಿ ಕೃತಿಯನ್ನು ಪರಿಚಯಿಸಿದರು. ಕನ್ನಡ ಬಳಗದ ಅಧ್ಯಕ್ಷ ಎಂ.ಆರ್. ವಾಸುದೇವ ವಂದಿಸಿದರು. ಕನ್ನಡ ಉಪನ್ಯಾಸಕ ಯಶುಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News