ಡೆಂಗ್: ಸ್ವಚ್ಛತಾ ಅಭಿಯಾನಕ್ಕೆ ಮನಪಾ ಜಂಟಿ ಆಯುಕ್ತೆ ಸೂಚನೆ

Update: 2019-07-20 17:14 GMT

ಮಂಗಳೂರು, ಜು.20: ದ.ಕ. ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳ ಆವರಣ ಹಾಗೂ ಕಟ್ಟಡ ಆವರಣದಲ್ಲಿ ಸಾಂಕ್ರಾಮಿಕ ರೋಗಗಳಿಗೆ ಕಾರಣ ಆಗುವ ಚಟುವಟಿಕೆಗಳಿಗೆ ಆಸ್ಪದ ನೀಡದಂತೆ, ಸ್ವಚ್ಛತಾ ಅಭಿಯಾನಕ್ಕೆ ಮಂಗಳೂರು ನಗರಪಾಲಿಕೆ ಜಂಟಿ ಆಯುಕ್ತೆ ಗಾಯತ್ರಿ ನಾಯಕ್ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ಜನಜಾಗೃತಿ ಉಪ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಾಲಾ-ಕಾಲೇಜುಗಳ ಕಟ್ಟಡಗಳ ತಾರಸಿ, ಮೇಲ್ಛಾವಣಿ ಹಾಗೂ ಶಾಲಾ ಕಟ್ಟಡದ ಸುತ್ತಮುತ್ತ ನೀರು ನಿಲ್ಲದಂತೆ ಗಮನ ಹರಿಸಬೇಕು. ಈ ಹಿನ್ನೆಲೆಯಲ್ಲಿ ಶಾಲಾ ಕಟ್ಟಡಗಳ ಮೂಲೆ ಮೂಲೆಗಳನ್ನು ಪರಿಶೀಲನೆ ನಡೆಸಬೇಕು. ಆಯಾ ಶಾಲಾ ಮುಖ್ಯೋಪಾಧ್ಯಾಯರ ನೇತೃತ್ವದಲ್ಲಿ ಶಾಲಾಶಿಕ್ಷಕರು ಹಾಗೂ ಹಿರಿಯ ವಿದ್ಯಾರ್ಥಿಗಳನ್ನು ಈ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಶಾಲಾ ಆಟದ ಮೈದಾನ, ನೀರಿನ ಟ್ಯಾಂಕ್, ಶೌಚಾಲಯ ಮತ್ತಿತರ ಸ್ಥಳಗಳಲ್ಲಿ ತಪಾಸಣೆ ನಡೆಸಿ ಮಲೇರಿಯಾ, ಡೆಂಗ್ ರೋಗಗಳಿಗೆ ಕಾರಣವಾಗುವ ಯಾವುದೇ ರೀತಿಯ ಅಂಶಗಳು ಸೃಷ್ಟಿಯಾಗದಂತೆ ಹಾಗೂ ನೀರು ನಿಲ್ಲದಂತೆ ಗಮನ ಹರಿಸಬೇಕು. ಈ ಬಗ್ಗೆ ಪ್ರತಿನಿತ್ಯ ಜಿಲ್ಲಾಡಳಿತಕ್ಕೆ ವರದಿ ನೀಡಲು ಸೂಚಿಸಿದರು.

ಪ್ರತಿನಿತ್ಯ ಶಿಕ್ಷಕರು ವಿದ್ಯಾರ್ಥಿಗಳಿಗೆ ಸಾಂಕ್ರಮಿಕ ರೋಗಗಳ ನಿಯಂತ್ರಣ ಬಗ್ಗೆ ತಿಳುವಳಿಕೆ ನೀಡಬೇಕು. ಇದರ ಬಗ್ಗೆ ಜಾಗೃತಿ ಮೂಡಿಸುವ ಪೂರಕವಾದ ಸಾಕ್ಷಚಿತ್ರಗಳನ್ನು ಪ್ರದರ್ಶಿಸಬೇಕು. ಶಾಲಾ-ಕಾಲೇಜುಗಳಲ್ಲಿರುವ ಎನ್ನೆಸ್ಸೆಸ್, ಎನ್‌ಸಿಸಿ ತಂಡಗಳನ್ನು ಬಳಸಿಕೊಳ್ಳಬೇಕು. ಈ ಚಟುವಟಿಕೆಗಳನ್ನು ಮುಂದಿನ ಒಂದು ತಿಂಗಳಲ್ಲಿ ನಿರಂತರವಾಗಿ ನಡೆಸಲು ಅವರು ನಿರ್ದೇಶನ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವರಾಮಯ್ಯ ಮಾತನಾಡಿ, ಈಗಾಗಲೇ ಶಾಲೆಗಳಿಗೂ ತಮ್ಮ ಆವರಣವನ್ನು ಸ್ವಚ್ಛವಾಗಿಟ್ಟು, ನೀರು ನಿಲ್ಲದಂತೆ ಎಚ್ಚರಿಕೆ ವಹಿಸಲು ತಿಳಿಸಲಾಗಿದೆ. ಇದನ್ನು ನಿರಂತರವಾಗಿ ಗಮನಿಸಲಾಗುತ್ತಿದೆ ಎಂದು ಹೇಳಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ವಾಸುದೇವ ಕಾಮತ್, ಕಾಲೇಜು ಶಿಕ್ಷಣ ಇಲಾಖೆ ವಿಶೇಷಾಧಿಕಾರಿ ಶ್ರೀಧರ ಮಣಿಯಾನಿ, ಆರೋಗ್ಯ ಇಲಾಖೆ ಅಧಿಕಾರಿಗಳಾದ ಡಾ. ರಾಜೇಶ್, ಡಾ.ದುರ್ಗಾಕುಮಾರ್, ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News