ಶ್ರೀಮಂತ್ ಪಾಟೀಲ್ ದಾಖಲಾಗಿರುವ ಆಸ್ಪತ್ರೆಯಲ್ಲಿ ಹೃದ್ರೋಗ ಚಿಕಿತ್ಸಾ ವಿಭಾಗವೇ ಇಲ್ಲ: ಕಾಂಗ್ರೆಸ್‌ ನಾಯಕಿಯ ಆರೋಪ

Update: 2019-07-20 18:37 GMT

ಮುಂಬೈ, ಜು. 20: ದಕ್ಷಿಣ ಮುಂಬೈಯ ಸಂತ ಜಾರ್ಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತನ್ನ ಪಕ್ಷದ ಕರ್ನಾಟಕದ ಶಾಸಕ ಶ್ರೀಮಂತ್ ಪಾಟೀಲ್ ಅವರನ್ನು ಭೇಟಿಯಾಗುವುದಕ್ಕೆ ಪೊಲೀಸರು ತಡೆ ಒಡ್ಡಿದ್ದಾರೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ನಾಯಕಿ ಯಶೋಮತಿ ಠಾಕೂರ್ ಆರೋಪಿಸಿದ್ದಾರೆ.

ಹೃದ್ರೋಗದಿಂದ ಬಳಲುತ್ತಿರುವ ಪಾಟೀಲ್ ಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯಲ್ಲಿ ಹೃದ್ರೋಗ ಚಿಕಿತ್ಸಾ ವಿಭಾಗವೇ ಇಲ್ಲ ಎಂದು ಅವರು ಹೇಳಿದ್ದಾರೆ.

‘‘ಕರ್ನಾಟಕ ವಿಧಾನ ಸಭೆ ಚುನಾವಣೆ (2018)ಯಲ್ಲಿ ನಾವು ಅವರಿಗೆ (ಪಾಟೀಲ್) ನೆರವು ನೀಡಿದ್ದೇವೆ. ಆದರೆ, ಸರಕಾರದ ಅಣತಿಯಂತೆ ಪೊಲೀಸರು ನನಗೆ ಪಾಟೀಲ್ ಅವರನ್ನು ಭೇಟಿಯಾಗಲು ಅವಕಾಶ ನೀಡಲಿಲ್ಲ’ ಎಂದು ಠಾಕೂರ್ ಹೇಳಿದ್ದಾರೆ.

‘‘ಪಾಟೀಲ್ ಅವರ ಪುತ್ರ ಶ್ರೀನಿವಾಸ್ ಕೂಡ ಅಲ್ಲಿದ್ದರು. ಅವರು ಕೂಡ ನಾನು ಪಾಟೀಲ್ ಅವರನ್ನು ಭೇಟಿಯಾಗುವುದನ್ನು ವಿರೋಧಿಸಿದ್ದರು. ಕರ್ನಾಟಕ ವಿಧಾನ ಸಭೆ ಚುನಾವಣೆ ಸಂದರ್ಭ ಚುನಾವಣಾ ಸಿದ್ಧತೆ ಸಂಯೋಜಿಸಿದವರಲ್ಲಿ ಅವರು ಕೂಡ ಒಬ್ಬರು.’’ ಎಂದು ಅವರು ತಿಳಿಸಿದ್ದಾರೆ.

ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಾಟೀಲ್ ಅವರನ್ನು ಗುರುವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News