ಪುತ್ತೂರು: ಅಧಿಕಾರಿಗಳು ಮತ್ತು ರಿಕ್ಷಾ ಚಾಲಕ ಮಾಲಕ ಸಂಘಟನೆಗಳ ಮುಖಂಡರ ಸಭೆ

Update: 2019-07-20 18:17 GMT

ಪುತ್ತೂರು: ನಗರ ಸೇರಿದಂತೆ ಪುತ್ತೂರು ತಾಲೂಕಿನ ಗ್ರಾಮೀಣ ಭಾಗದಲ್ಲಿ ಆಟೋ ರಿಕ್ಷಾಗಳ ಸಂಖ್ಯೆ ಮಿತಿ ಮೀರುತ್ತಿದ್ದು, ಇದರಿಂದ ವಾಹನದಟ್ಟಣೆ, ಪಾರ್ಕಿಂಗ್ ಸಮಸ್ಯೆಗಳು ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಹೊಸ ಆಟೋಗಳಿಗೆ ಪರವಾನಿಗೆ ನೀಡುವುದನ್ನು ನಿರ್ಬಂಧಿಸಲು ಚಿಂತನೆ ನಡೆಸಲಾಗಿದೆ. 

ಉಪವಿಭಾಗಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಮಿನಿ ವಿಧಾನಸೌಧದಲ್ಲಿ ನಡೆದ ಉನ್ನತ ಅಧಿಕಾರಿಗಳು ಮತ್ತು ರಿಕ್ಷಾ ಚಾಲಕ ಸಂಘಟನೆಗಳ ಪದಾಧಿಕಾರಿಗಳ ಸಭೆಯಲ್ಲಿ ಈ ಉಪಕ್ರಮಕ್ಕೆ ಸಾರಿಗೆ ಇಲಾಖೆಗೆ ಸೂಚನೆ ನೀಡಲಾಯಿತು.

ನಗರ ಮತ್ತು ತಾಲೂಕಿನಲ್ಲಿ ಸುಮಾರು 5 ಸಾವಿರ ಆಟೋ ರಿಕ್ಷಾಗಳಿವೆ.  ಈ ನಡುವೆ ಪ್ರತೀ ವಾರ ಹೊಸ ರಿಕ್ಷಾಗಳು ರಸ್ತೆಗೆ ಇಳಿಯುತ್ತಿವೆ. ಇದರಿಂದಾಗಿ ರಿಕ್ಷಾ ಚಾಲಕ, ಮಾಲೀಕರಿಗೆ ಆದಾಯಕ್ಕೆ ಹೊಡೆತ ಬೀಳುತ್ತಿವೆ. ಈ ಸಮಸ್ಯೆ ನಿವಾರಣೆಗಾಗಿ ತಾತ್ಕಾಲಿಕವಾಗಿ ಹೊಸ ಪರ್ಮಿಟ್ ಸ್ಥಗಿತಗೊಳಿಸುವಂತೆ ಕಳೆದ ನಾಲ್ಕು ವರ್ಷಗಳಿಂದ ರಿಕ್ಷಾ ಯೂನಿಯನ್‍ಗಳು ಮನವಿ ನೀಡುತ್ತಲೇ ಬಂದಿವೆ ಎಂದು ಸಂಘಟನೆಗಳ ಮುಖಂಡರು ದೂರಿದರು. ಈ ಮನವಿಗಳ ಆಧಾರದಲ್ಲಿ ವಸ್ತುಸ್ಥಿತಿ ವರದಿ ಜತೆಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಪರವಾನಗಿ ಸ್ಥಗಿತಗೊಳಿಸುವಂತೆ ನಮಗೆ ಆದೇಶ ಬಂದಿಲ್ಲ ಎಂದು ಆರ್‍ಟಿಒ ಆನಂದ ಗೌಡ ಹೇಳಿದರು.

ಈ ಬಗ್ಗೆ ಪ್ರಸ್ತಾವನೆ ಸಿದ್ಧಪಡಿಸಿ. ಇದನ್ನು ಸಾರಿಗೆ ಆಯುಕ್ತರಿಗೆ ಕಳುಹಿಸೋಣ. ಈ ಬಗ್ಗೆ ಸಾರಿಗೆ ಆಯುಕ್ತರ ಜತೆ ಮಾತನಾಡುತ್ತೇನೆ ಎಂದು ಕೃಷ್ಣಮೂರ್ತಿ ಅವರು ಭರವಸೆ ನೀಡಿದರು. ಆಟೋ ರಿಕ್ಷಾ ಪರವಾನಿಗೆಯ ಶುಲ್ಕವನ್ನು ಹೆಚ್ಚಿಸಬೇಕು ಎಂದು ಸಂಘಟನೆಯ ಮುಖಂಡರು ಆಗ್ರಹಿಸಿದರು.

ಒಬ್ಬ ವ್ಯಕ್ತಿಗೆ 10ರಿಂದ 15 ರಿಕ್ಷಾ ಪರವಾನಿಗೆ ನೀಡಲಾಗಿದ್ದು, ಅವರು ಇದನ್ನು ಉದ್ಯಮ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಬಡ ರಿಕ್ಷ ಚಾಲಕರಿಗೆ ಅನ್ಯಾಯವಾಗುತ್ತಿದೆ ಎಂದು ಸಂಘಟನೆ ಮುಖಂಡರು ತಿಳಿಸಿದಾಗ ಅಂತವರ ಪಟ್ಟಿ ತಯಾರಿಸಿ ಸರ್ಕಾರಕ್ಕೆ ವರದಿ ನೀಡುವ ಮೂಲಕ ಕ್ರಮ ಕೈಗೊಳ್ಳುವುದು ಎಂದು ಎಸಿ ತಿಳಿಸಿದರು.

ಪುತ್ತೂರಿನ ನಗರದ ಮುಖ್ಯ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳು ಪಾರ್ಕಿಂಗ್ ಮಾಡುವ ಕಾರಣ ಸಮಸ್ಯೆ ಉಲ್ಬಣಿಸುತ್ತದೆ. ತೆರವು ಮಾಡಿದರೆ ಪರ್ಯಾಯ ವ್ಯವಸ್ಥೆ ಇಲ್ಲ. ಪಾರ್ಕಿಂಗ್ ತೆರವು ಮಾಡಿದರೆ ವರ್ತಕರು ತಮಗೆ ವ್ಯಾಪಾರವಾಗುತ್ತಿಲ್ಲ ಎಂದು ದೂರುತ್ತಾರೆ.

ಸಮಸ್ಯೆಯಿಂದ ಧರ್ಮ ಸಂಕಟ ಎದುರಾಗಿದೆ ಎಂದು ಪೊಲೀಸ್ ಇನ್‍ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ್ ಹೇಳಿದರು.  ಮುಖ್ಯರಸ್ತೆಯ ಬದಿಗಳಲ್ಲಿ ಪಾರ್ಕಿಂಗ್‍ಗೆ ಪರ್ಯಾಯ ದಿನಗಳನ್ನು ಗುರುತಿಸಲು ಟ್ರಾಫಿಕ್ ಪೊಲೀಸ್ ಮತ್ತು ನಗರಸಭೆಗೆ ಸೂಚಿಸಲಾಯಿತು.  ಏಕಮುಖ ರಸ್ತೆ ನಿಯಮದ ಬಗ್ಗೆ ಚಾಲಕ ಸಂಘಟನೆಗಳ ಆಕ್ಷೇಪ ವ್ಯಕ್ತವಾದ ಕಾರಣ ಈ ಬಗ್ಗೆ ಖುದ್ದು ಸ್ಥಳ ಪರಿಶೀಲನೆ ನಡೆಸುವುದಾಗಿ ಅವರು ತಿಳಿಸಿದರು.

ಬಸ್ ನಿಲ್ದಾಣ ಪ್ರದೇಶದಲ್ಲಿ ಸಂಚಾರ ದಟ್ಟಣೆ ವ್ಯಾಪಕವಾಗಿರುವ ಕಾರಣ ಇಲ್ಲೊಂದು ಪಾದಚಾರಿ ಮೇಲ್ಸೇತುವೆ ನಿರ್ಮಿಸುವುದು. ಬಸ್ ನಿಲ್ದಾಣದಿಂದ ಮತ್ತು ಅರಣ್ಯ ಇಲಾಖೆ ಕಚೇರಿ ಬಳಿಯಿಂದ ಆರಂಭಗೊಳ್ಳುವ ಮೇಲ್ಸೇತುವೆಯು ಎಂ.ಟಿ. ರಸ್ತೆ ಮತ್ತು ಮುಖ್ಯರಸ್ತೆಯಲ್ಲಿ ಇಳಿಯುವಂತಿರಬೇಕು. ಇದಕ್ಕೊಂದು ಪ್ರಸ್ತಾವನೆ ಮತ್ತು ಅಂದಾಜು ಪಟ್ಟಿ ತಯಾರಿಸುವಂತೆ ಉಪವಿಭಾಗಾಧಿಕಾರಿ ನಗರಸಭೆಗೆ ಸೂಚನೆ ನೀಡಿದರು.

ಸಭೆಯಲ್ಲಿ ಡಿವೈಎಸ್‍ಪಿ ದಿನಕರ ಶೆಟ್ಟಿ, ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಆನಂದ ಗೌಡ, ತಹಸೀಲ್ದಾರ್ ಅನಂತ ಶಂಕರ್, ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್, ನಗರ ಠಾಣಾ ಇನ್‍ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ್, ಟ್ರಾಫಿಕ್ ಎಸ್‍ಐ ಚೆಲುವಯ್ಯ ,ರಿಕ್ಷಾ ಚಾಲಕರ ಸಂಯುಕ್ತ ಹೋರಾಟ ಸಮಿತಿಯ ಅಧ್ಯಕ್ಷ ಜಯರಾಮ್ ಕುಲಾಲ್, ಕರ್ನಾಟಕ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ನಾಸಿರ್ ಇಡ್ಯೊಟ್ಟು, ಕಾರ್ಯದರ್ಶಿ ಸಂಜೀವ ಪೂಜಾರಿ, ಸ್ನೇಹ ಸಂಗಮ ಆಟೋ ಚಾಲಕ- ಮಾಲೀಕರ ಸಂಘದ ಅಧ್ಯಕ್ಷ ಸಿಲ್ವೆಸ್ಟರ್ ಡಿಸೋಜ, ಕಾರ್ಯಾಧ್ಯಕ್ಷ ಚನಿಯಪ್ಪ ನಾಯ್ಕ್,  ಉಪಾಧ್ಯಕ್ಷ ಅರವಿಂದ ಪೆರಿಗೇರಿ, ಬಿಎಂಎಸ್ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಮುಖಂಡರಾದ ಬಿ.ಕೆ. ದೇವಪ್ಪ ಗೌಡ, ಭಾಸ್ಕರ ನಾಯ್ಕ್, ಬಿ. ಮೋಹನ್, ಕೆ. ನಾರಾಯಣ ಗೌಡ, ಮಹೇಶ್ ಪ್ರಭು, ಸಂತೋಷ್ ಕುಮಾರ್, ಸೋಷಿಯಲ್ ಡೆಮಾಕ್ರಟಿಕ್ ಆಟೋ ಯೂನಿಯನ್ ಸಂಚಾಲಕ ಮಹಮ್ಮದ್ ಆಸಿಫ್, ಬಾತಿಷಾ ಬಡೆಕ್ಕೋಡಿ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News