ಭಾರೀ ಮಳೆಗೆ ಅಲ್ಲಲ್ಲಿ ಮನೆಗಳಿಗೆ ಹಾನಿ; ಕೃತಕ ನೆರೆ

Update: 2019-07-20 18:44 GMT

ಮಂಜೇಶ್ವರ: ಜಿಲ್ಲೆಯಲ್ಲಿ ಮಳೆ ಬಿರುಸುಗೊಂಡಿದ್ದು ಕಳೆದ ದಿನ ಸುರಿದ ಭಾರೀ ಮಳೆಯಿಂದಾಗಿ ಕುಂಬಳೆ ರೈಲು ಹಳಿಗಳೂ ನೀರಿನಲ್ಲಿ ಮುಳುಗಿ ಮಳೆ ನೀರು ರೈಲು ನಿಲ್ದಾಣದೊಳಗೆ ಪ್ರವೇಶಿಸಿದೆ. ಇದರಿಂದಾಗಿ ರೈಲು ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ವಿಷಯ ತಿಳಿದು ಶುಕ್ರವಾರ ರಾತ್ರಿ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಸ್ಥಿತಿಗತಿ ಅವಲೋಕಿಸಿದರು.

ಕುಂಬಳೆ ಕೊಡ್ಯಮ್ಮೆ ಶಾಲೆ ಬಳಿಯ ಸೇತುವೆ ಕುಸಿದು ಬಿದ್ದಿದ್ದು, ಸಾರಿಗೆ ಸಂಚಾರಕ್ಕೆ ತೊಡಕುಂಟಾಗಿದೆ. ಕೊಯಿಪ್ಪಾಡಿ-ಕುಂಬಳೆ ರೈಲ್ವೇ ಸುರಂಗ ರಸ್ತೆಯಲ್ಲಿ ನೀರು ತುಂಬಿಕೊಂಡು ಸಾರಿಗೆ ಸಂಚಾರಕ್ಕೆ ಅಡ್ಡಿಯಾಗಿದೆ. ಕಂಚಿಕಟ್ಟೆಯ ಮೊಹಮ್ಮದ್ ರಿಫಾಯಿ ಅವರ ಮನೆ ಕುಸಿದು ಬಿದ್ದಿದೆ. ಶಿರಿಯ ಮತ್ತು ಪರಿಸರ ಪ್ರದೇಶಗಳ ತಗ್ಗು ಪ್ರದೇಶಗಳು ನೀರಿನಿಂದ ಆವೃತ್ತವಾಗಿದೆ. ಉಪ್ಪಳ, ಶಿರಿಯ ಹೊಳೆಗಳಲ್ಲಿ ನೀರಿನ ಮಟ್ಟ ಹೆಚ್ಚಾಗತೊಡಗಿದೆ. ಶಿರಿಯ ವಾನಂದೆಯಲ್ಲಿ 30 ಎಕರೆ ಬಯಲು ಪ್ರದೇಶದಲ್ಲಿ ನೀರು ತುಂಬಿ ಕೊಂಡಿದೆ. ಮೂಸೋಡಿ ಒಳ ರಸ್ತೆಯಲ್ಲಿ ನೀರು ತುಂಬಿಕೊಂಡಿದೆ. ಕುಬಣೂರು ಶ್ರೀರಾಮ ಶಾಲೆಯ ಗೋಡೆ ಕುಸಿದು ರಸ್ತೆಗೆ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ. 

ಬಂದ್ಯೋಡು ಅಡ್ಕ ಎಂಬಲ್ಲಿಯ ಆಯಿಷಮ್ಮ ಎಂಬವರ ಮನೆಯ ಸಮೀಪದ ಅಂಗಳ ಭಾಗಶಃ ಶನಿವಾರ ಮಧ್ಯಾಹ್ನ ಕುಸಿದಿದೆ. ಉಪ್ಪಳ ಮಣಿಮುಮಡ ಕಡಲ ತೀರದಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಜೊತೆಗೆ ಈ ಪರಿಸರದ ಒಳಚರಂಡಿ ವ್ಯವಸ್ಥೆ ಸಂಪೂರ್ಣ ಹಾನಿಗೊಂಡು ವ್ಯಾಪಕ ಪ್ರಮಾಣದ ನೀರು ಕಟ್ಟಿನಿಂತಿದೆ.  

ಮೀಂಜದಲ್ಲಿ ಗುಡ್ಡೆ ಕುಸಿತ: ಮೀಂಜ ಪಂಚಾಯತ್‍ನ 6 ನೇ ವಾರ್ಡ್ ದೇರಂಬಳ ಮಿತ್ತಾಳದಲ್ಲಿ ಗುಡ್ಡೆ ಕುಸಿದು ಕಮಲ ಅವರ ಮನೆ ಹಿಂಭಾಗಕ್ಕೆ ಬಿದ್ದಿದೆ. ಶುಕ್ರವಾರ ರಾತ್ರಿ ಘಟನೆ ಸಂಭವಿಸಿದ್ದು, ಮನೆಯಲ್ಲಿದ್ದ ಕಮಲ ಮತ್ತು ಅವರ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News