ತೆರಿಗೆ ಪಾವತಿಸದೇ ಚೆಕ್ ಪೋಸ್ಟ್ ದಾಟಿ ರಾಜ್ಯ ಪ್ರವೇಶಿಸಿದ ವಾಹನಕ್ಕೆ ದಂಡ ಹೇರಿಕೆ

Update: 2019-07-20 18:47 GMT

ಮಂಜೇಶ್ವರ: ಕೇರಳ ವಾಹನ ತೆರಿಗೆ ಪಾವತಿಸದೆ ರಾಜ್ಯ ಪ್ರವೇಶ ಮಾಡಿದ ಆರೋಪದಲ್ಲಿ ಕರ್ನಾಟಕ ನೋಂದಣಿ ಹೊಂದಿರುವ ಮಿನಿ ಬಸ್ ಗೆ ಕಾಸರಗೋಡು ಮೋಟಾರು ವಾಹನ ಇಲಾಖೆಯ ಎನ್ ಫೋರ್ಸ್ ಮೆಂಟ್ ವಿಭಾಗ 1,23,000 ರೂ. ದಂಡ ಹೇರಿದೆ.

ಜು.11 ರಂದು ಮಂಜೇಶ್ವರ ಚೆಕ್ ಪೋಸ್ಟ್ ನಲ್ಲಿ ತೆರಿಗೆ ಪಾವತಿಸದೇ ಅಕ್ರಮವಾಗಿ ಕೇರಳ ಪ್ರವೇಶ ಮಾಡಿದ ಮಿನಿಬಸ್ ಸಿಬ್ಬಂದಿಗೆ ದಂಡ ಹೇರಿದ್ದಾರೆ. ಕರ್ನಾಟಕ ಟ್ಯೂರಿಸ್ಟ್ ಪರವಾನಿಗೆ ವಾಹನಗಳಿಗೆ ಕೇರಳ ಪ್ರವೇಶ ನಡೆಸುವ ವೇಳೆ ಚೆಕ್ ಪೋಸ್ಟ್ ನಲ್ಲಿ ಕೇರಳ ತೆರಿಗೆ/ಪರವಾನಗಿ ಪಡೆದು ಒಳಪ್ರವೇಶಿಸಬೇಕು ಎಂಬುದು ನಿಬಂಧನೆ. 21 ಆಸನಗಳಿರುವ ವಾಹನದಲ್ಲಿ 20 ಮಂದಿ ಯಾತ್ರಿಕರು ಸಂಚಾರ ನಡೆಸುವ ನಿಟ್ಟಿನಲ್ಲಿ ತೆರಿಗೆ ಪಾವತಿಸಬೇಕಿತ್ತು.

ಎಂ.ಟಿ.ಐ.ಟಿ.ವೈಕುಂಠನ್, ಎ.ಎಂ.ವಿ.ಐ.ಗಣೇಶನ್, ಚಾಲಕ ಮನೋಜ್ ಕುಮಾರ್ ನೇತೃತ್ವದ ತಂಡ ಬೇಕಲದ ಖಾಸಗಿ ರೆಸಾರ್ಟ್ ಬಳಿ ನಿಲುಗಡೆ ಮಾಡಲಾಗಿದ್ದ ವಾಹನವನ್ನು ವಶಕ್ಕೆ ತೆಗೆದುಕೊಂಡು ವಿದ್ಯಾನಗರ ಪೊಲೀಸರ ವಶಕ್ಕೆ ನೀಡಿತ್ತು. ತೆರಿಗೆ ಮತ್ತು ದಂಡ ಹೇರಿಕೆ ನಂತರ ವಾಹನ ಬಿಟ್ಟುಕೊಡಲಾಯಿತು. ಈ ಪ್ರಕರಣದಲ್ಲಿ ಕ್ರಮಕೈಗೊಂಡ ಸಿಬ್ಬಂದಿಯನ್ನು ಆರ್.ಟಿ.ಒ. ಎಸ್.ಮನೋಜ್ ಅಭಿನಂದಿಸಿದರು. ಮುಂದಿನ ದಿನಗಳಲ್ಲೂ ತಪಾಸಣೆ ಬಿಗಿಯಾಗಿ ನಡೆಯಲಿದೆ ಎಂದು ಹೇಳಿದರು.    
           

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News