ಎರ್ಮಾಳ್: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ

Update: 2019-07-21 08:33 GMT

ಪಡುಬಿದ್ರೆ, ಜು.21: ಶೈಕ್ಷಣಿಕವಾಗಿ ಮುಂದುವರಿದ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಬ್ಯಾಂಕಿಂಗ್ ಸಹಿತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಉನ್ನತ ಹುದ್ದೆಗಳಲ್ಲಿ ವಿರಳವಾಗಿ ಕಂಡುಬರುತ್ತಿದ್ದಾರೆ. ಇದಕ್ಕೆ ಬೇಕಾದ ಸೂಕ್ತ ತರಬೇತಿಯ ಕೊರತೆಯು ಕಾರಣ ಎಂದು ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಡಿಜಿಎಂ ಶಂಕರ ಕೋಟ್ಯಾನ್ ಅಭಿಪ್ರಾಯಿಸಿದ್ದಾರೆ.

ಎರ್ಮಾಳು ಸಂಯುಕ್ತ ಪ್ರೌಢಶಾಲೆಯಲ್ಲಿ ಉಡುಪಿಯ ಪರಿಣತ ಭಾರತಿ ಹಾಗೂ ಎರ್ಮಾಳು ತೆಂಕ ಯುವಕ ಮಂಡಲದ ಜಂಟಿ ಆಶ್ರಯದಲ್ಲಿ ಬ್ಯಾಂಕ್ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ರವಿವಾರ ಆಯೋಜಿಸಿದ್ದ ಉಚಿತ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಬ್ಯಾಂಕಿಂಗ್ ಸಹಿತ ಕೇಂದ್ರ ಸರ್ಕಾರದ ಹಲವು ಉನ್ನತ ಹುದ್ದೆಗಳಿಗೆ ಬಹಳಷ್ಟು ಅವಕಾಶಗಳಿವೆ. ಈ ತರಬೇತಿಯಲ್ಲಿ ಉನ್ನತ ಹುದ್ದೆಗಳಲ್ಲಿ ಇರುವ ನುರಿತ ತರಬೇತುದಾರರಿಂದ ನೀಡಲಾಗುವುದು. ಇದರ ಪ್ರಯೋಜನವನ್ನು ಪಡೆದುಕೊಂಡು ಉನ್ನತೆ ಹುದ್ದೆಯತ್ತ ಗಮನ ನೀಡಿ ಎಂದು ಅವರು ಸಲಹೆ ನೀಡಿದರು.

ಪರಿಣತ ಭಾರತಿಯ ಸಂಚಾಲಕ ಪಾಂಡುರಂಗ ಶಾನ್‌ಬಾಗ್ ಮಾತನಾಡಿ, ಗ್ರಾಮೀಣ ಪ್ರದೇಶದ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ಉನ್ನತ ಹುದ್ದೆಯನ್ನು ಪಡೆದುಕೊಳ್ಳಬೇಕು. ಅದಕ್ಕಾಗಿ ಅವರಲ್ಲಿ ಧೈರ್ಯ ತುಂಬುವ ಸ್ಪರ್ಧಾತ್ಮಕ ಪರೀಕ್ಷೆಯನ್ನು ಸುಲಭವಾಗಿ ಎದುರಿಸಲು ಬೇಕಾದ ಎಲ್ಲಾ ತರಬೇತಿಯನ್ನು ನೀಡಲಾಗುವುದು. ಜಿಲ್ಲೆಯ ವಿವಿಧ ಭಾಗಗಳಲ್ಲೂ ಇಂತಹ ತರಬೇತಿ ನಡೆಸುವ ಬಗ್ಗೆ ಯೋಜನೆ ರೂಪಿಸಲಾಗಿದೆ ಎಂದರು.

ತರಬೇತಿ: ಇಲ್ಲಿ ಬ್ಯಾಂಕಿಂಗ್ ಹಾಗೂ ಐಎಎಸ್, ಐಪಿಎಸ್, ಕೆಎಎಸ್ ನಂತಹ ವಿವಿಧ ಸ್ಪರ್ಧಾತ್ಮ ಪರೀಕ್ಷೆಗಳಿಗೆ ಬೇಕಾದ ತರಬೇತಿಯನ್ನು 24 ರವಿವಾರ ನೀಡಲಾಗುವುದು. ಪ್ರತಿ ದಿನ ಬೆಳಗ್ಗೆ 9ರಿಂದ ಅಪರಾಹ್ನ 2ರವರೆಗೆ ವಿವಿಧ ವಿಷಯಗಳ ಬಗ್ಗೆ ತರಬೇತಿ ನೀಡಲಾಗುವುದು. ತರಬೇತಿಯಲ್ಲಿ ಸ್ಪರ್ಧಾತ್ಮ ಪರೀಕ್ಷೆ ಎದುರಿಸುವುದು, ಗುಂಪು ಚರ್ಚೆ, ಸಂದರ್ಶನದಂತಹ ಹಲವು ತರಬೇತಿಯನ್ನು ನೀಡಲಾಗುವುದು. ಹೆಜಮಾಡಿಯಿಂದ ಕಾಪುವರೆಗಿನ ವಿದ್ಯಾರ್ಥಿಗಳ ಈಗಾಗಲೇ 50ಕ್ಕೂ ಅಧಿಕ ಮಂದಿ ನೋಂದಾಯಿಸಿಕೊಂಡಿದ್ದಾರೆ.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸತೀಶ್ ಸಾಲ್ಯಾನ್, ಶಾಲಾ ಮುಖ್ಯೋಪಾಧ್ಯಾಯಿನಿ ಸುನೀತಾ, ಮಹಿಳಾ ಮಂಡಲದ ಅಧ್ಯಕ್ಷೆ ಶೀಲಾ ವಿ. ಸುವರ್ಣ, ಅಮೃತ್ ರಾಜ್, ನಿವೃತ್ತ ಶಿಕ್ಷಕ ಬಿ.ಪಿ. ನಾಯಕ್, ಶಿಕ್ಷಕ ಗಂಗಾಧರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News