11 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ: ಎನ್‍ಎಸ್ ಜಿ ಕಮಾಂಡೊ ವಿರುದ್ಧ ಪ್ರಕರಣ ದಾಖಲು

Update: 2019-07-21 09:22 GMT

ಗುರುಗಾಂವ್, ಜು.21: ಎನ್‍ಎಸ್‍ ಜಿ ಮನೇಸರ್ ಕ್ಯಾಂಪಸ್‍ ನಲ್ಲಿ ಹನ್ನೊಂದು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ರಾಷ್ಟ್ರೀಯ ಭದ್ರತಾ ಗಾರ್ಡ್ (ಎನ್‍ಎಸ್‍ ಜಿ) ಕಮಾಂಡೊ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪೋಕ್ಸೋ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ಪರ್ಮೀಂದರ್ ಕುಮಾರ್ ಎಂದು ಗುರುತಿಸಲಾಗಿದೆ. ಜುಲೈ 15ರಂದು ಮನೆಗೆ ಮರಳುತ್ತಿದ್ದ ಬಾಲಕಿಯನ್ನು ತಡೆದು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದ ಎಂದು ಹೇಳಲಾಗಿದೆ.

"ಸಂತ್ರಸ್ತೆ ಬಾಲಕಿ ಎನ್‍ಎಸ್‍ ಜಿ ಕ್ಯಾಂಪಸ್‍ ನ ವಸತಿ ಸಂಕೀರ್ಣದಲ್ಲಿ ತಾಯಿಯೊಂದಿಗೆ ವಾಸವಿದ್ದಳು. ಆಕೆಯ ತಾಯಿ ಎನ್‍ಎಸ್‍ ಜಿ ಶಾಲೆಯಲ್ಲಿ ಶಿಕ್ಷಕಿ" ಎಂದು ಮನೇಸರ್ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿ ಮೀನಾ ವಿವರ ನೀಡಿದ್ದಾರೆ.

ಬಾಲಕಿ ಘಟನೆಯ ಬಗ್ಗೆ ತಾಯಿ ಬಳಿ ಹೇಳಿಕೊಂಡಾಗ ಈ ಕೃತ್ಯ ಬೆಳಕಿಗೆ ಬಂದಿದೆ. ತಕ್ಷಣ ಗ್ರೂಪ್ ಕಮಾಂಡರ್ ನರೇಶ್ ಕುಮಾರ್ ಶರ್ಮಾ ಅವರಿಗೆ ಘಟನೆ ಬಗ್ಗೆ ಮಾಹಿತಿ ನೀಡಲಾಯಿತು. ಸಿಸಿಟಿವಿ ದೃಶ್ಯಾವಳಿ ಮತ್ತು ಆಂತರಿಕ ವಿಚಾರಣೆಯಲ್ಲಿ ಕಮಾಂಡೊ ತಪ್ಪೆಸಗಿರುವುದು ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ. ಆರೋಪಿಯ ಬಂಧನಕ್ಕಾಗಿ ಮಾಹಿತಿ ಮತ್ತು ಪುರಾವೆ ಕಲೆಹಾಕಲಾಗುತ್ತಿದೆ ಎಂದು ತನಿಖಾಧಿಕಾರಿ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News