ಅಸ್ಸಾಂ ಪ್ರವಾಹದಲ್ಲಿ ಕೊಚ್ಚಿ ಹೋದ ಲಕ್ಷಾಂತರ ಮಂದಿಯ ಭಾರತೀಯ ನಾಗರಿಕತ್ವ

Update: 2019-07-21 09:39 GMT
Photo: PTI

ಗುವಾಹತಿ, ಜು.21: ರಾಜ್ಯದಲ್ಲಿ ವಾಸಿಸುವ ಭಾರತೀಯ ನಾಗರಿಕರ ಪಟ್ಟಿ ಎನಿಸಿದ ನ್ಯಾಷನಲ್ ರಿಜಿಸ್ಟ್ರಾರ್ ಆಫ್ ಸಿಟಿಝನ್ಸ್ (ಎನ್‍ಆರ್‍ಸಿ) ಅನ್ನು ಅಸ್ಸಾಂ ಜುಲೈ 31ರಂದು ಬಿಡುಗಡೆ ಮಾಡಲಿದೆ. ಇದು ವಿಶ್ವದಲ್ಲೇ ಅತಿದೊಡ್ಡ ನಾಗರಿಕ ಪರಿಶೀಲನಾ ಕಾರ್ಯಾಚರಣೆಯಾಗಿದ್ದು, ಲಕ್ಷಾಂತರ ಮಂದಿಯ ಭವಿಷ್ಯ ಅತಂತ್ರವಾಗುವ ಭೀತಿ ಎದುರಾಗಿದೆ.

ಈ ವರ್ಷದ ಅಸ್ಸಾಂ ಪ್ರವಾಹ ರಾಜ್ಯದ ಬಹಳಷ್ಟು ನಿವಾಸಿಗಳ ಬದುಕು ನಾಶ ಮಾಡುವ ಜತೆಗೆ ಪ್ರವಾಹದ ನೀರಿನಲ್ಲಿ ಅವರ ಅಮೂಲ್ಯ ದಾಖಲೆಗಳನ್ನು ಕೂಡಾ ಕೊಚ್ಚಿಕೊಂಡು ಹೋಗಿದೆ. ಎನ್‍ಆರ್‍ ಸಿಗೆ ಅಗತ್ಯವಾಗಿದ್ದ ಬಹಳಷ್ಟು ಮಂದಿಯ ದಾಖಲೆಗಳೂ ನೀರುಪಾಲಾಗಿವೆ. ಈ ದಾಖಲೆಗಳಿಲ್ಲದಿದ್ದರೆ ಅವರು ರಾಜ್ಯದಲ್ಲಿ ವಾಸಿಸುವುದು ಕಷ್ಟವಾಗಲಿದೆ.

1951ರ ಬಳಿಕ ಮೊದಲ ಬಾರಿಗೆ ಎನ್‍ಆರ್‍ ಸಿ ಪರಿಷ್ಕೃರಿಸಲಾಗುತ್ತಿದ್ದು, ದಾಖಲೆಯಿಲ್ಲದೇ ವಲಸೆ ಬಂದು ರಾಜ್ಯದಲ್ಲಿ ನೆಲೆಸಿರುವವರ ಪತ್ತೆಗಾಗಿ ಈ ಕಾರ್ಯಾಚರಣೆ ಆರಂಭಿಸಲಾಗಿದೆ. ಭಾರತದ ನಾಗರಿಕರು ಎಂದು ಸಾಬೀತುಪಡಿಸಲು ಅರ್ಜಿದಾರರು ಬಾಂಗ್ಲಾದೇಶದ ಯುದ್ಧಕ್ಕಿಂತ ಮುಂಚಿತವಾಗಿ ಅಂದರೆ 1971ರ ಮಾರ್ಚ್ 24ರ ಒಳಗೆ ಭಾರತಕ್ಕೆ ಬಂದಿದ್ದ ಬಗ್ಗೆ ದಾಖಲೆ ಒದಗಿಸಬೇಕು.

ಬಹಳಷ್ಟು ಮಂದಿ ಅರ್ಜಿದಾರರು ಈ ದಿನಾಂಕದ ಬಳಿಕ ಹುಟ್ಟಿದವರಾಗಿದ್ದು, ಇವರು ಎರಡು ಬಗೆಯ ದಾಖಲೆ ಒದಗಿಸಬೇಕಾಗುತ್ತದೆ. ಮೊದಲನೆಯದಾಗಿ ತಮ್ಮ ಪೂರ್ವಜನರು 1971ರ ಮುನ್ನ ಭಾರತದಲ್ಲಿ ವಾಸವಿದ್ದರು ಎಂದು ತೋರಿಸುವ ದಾಖಲೆ ಹಾಗೂ ಎರಡನೆಯದು ಆ ಕುಟುಂಬದ ಪರಂಪರೆಗೆ ತಾವು ಸೇರಿದವರು ಎನ್ನುವುದನ್ನು ಸಾಬೀತುಪಡಿಸುವ ದಾಖಲೆ.

ಆದರೆ ಬಹಳಷ್ಟು ಮಂದಿ ನೆರೆಯಿಂದಾಗಿ ಮನೆ ಮಠಗಳನ್ನು ಕಳೆದುಕೊಂಡಿದ್ದು, ಅವರಲ್ಲಿದ್ದ ಅಮೂಲ್ಯ ದಾಖಲೆಗಳು ಕೂಡಾ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿರುವುದರಿಂದ ಲಕ್ಷಾಂತರ ಮಂದಿಯ ಭವಿಷ್ಯ ಮಸುಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News