‘ಕೆಎಂಸಿ ಮಣಿಪಾಲದಿಂದ ಹಲವು ಹೊಸ ಯೋಜನೆಗಳು ಜಾರಿ’

Update: 2019-07-21 11:34 GMT

ಉಡುಪಿ, ಜು.20: ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಅತ್ಯಾಧುನಿಕ ಸೌಕರ್ಯ, ಸೌಲಭ್ಯಗಳನ್ನು ಒದಗಿಸುವುದಕ್ಕಾಗಿ ಹಾಗೂ ಅತ್ಯಾಧುನಿಕ ಮೇಲ್ಪಟ್ಟದ ಆರೋಗ್ಯ ಸೇವೆ ನೀಡಲು, ಅಲ್ಲದೇ ವೈದ್ಯಕೀಯ ಆರೈಕೆಯನ್ನು ಹೆಚ್ಚು ಸಮಗ್ರಗೊಳಿಸಲು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ಹಲವಾರು ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿಗಳನ್ನು ನೀಡಿದರು. ಉತ್ತಮ ರೋಗಿ ಕೇಂದ್ರಿತ ಸೇವೆ ಒದಗಿಸಲು ರೋಗಿಗಳಿಗೆ ಗೃಹ ಆರೈಕಾ ಸೇವೆಗಳನ್ನು ಈಗಾಗಲೇ ಒದಗಿಸಲಾಗಿದೆ. ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ರಕ್ತ ಸಂಗ್ರಹಣಾ ಕೇಂದ್ರ, ದಿನದ 24 ಗಂಟೆ ತೆರೆದಿರುವ ಔಷಧಾಲಯ, ಬರುವ ರೋಗಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲು ರೆಫರಲ್ ಡೆಸ್ಕ್, ಸ್ವಯಂ ನೋಂದಣಿ ಕೌಂಟರ್, ಮಗುವಿಗೆ ಹಾಲೂಡಿಸುವ ಕೊಠಡಿ ಅಲ್ಲದೇ ಡಿಜಿಟಲ್ ಮಾಹಿತಿಗಳನ್ನು ಪ್ರದರ್ಶಿಸಲಾಗುತ್ತಿದೆ ಎಂದರು.

ಇವುಗಳಿಂದ ರೋಗಿಗಳಿಗೆ ತುಂಬಾ ಅನುಕೂಲವಾಗಿದ್ದು, ಚಿಕಿತ್ಸಾ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ ಎಂದ ಡಾ.ಶೆಟ್ಟಿ, ಇತ್ತೀಚೆಗೆ ಆಸ್ಪತ್ರೆಯಲ್ಲಿ ಪ್ರಾರಂಭಿಸಿದ ಸಮಗ್ರ ಕ್ಯಾನ್ಸರ್ ಕೇಂದ್ರವು ಈಗ ಮಕ್ಕಳ ರಕ್ತ ಕ್ಯಾನ್ಸರ್ ತಜ್ಞ ಹಾಗೂ ಪ್ರಶಾಮಕ ಔಷಧಿ ವಿಭಾಗವನ್ನು ಹೊಂದಿದೆ. ಇದರಿಂದ ಸಮಗ್ರ ಕ್ಯಾನ್ಸರ್ ಆರೈಕೆ ಮತ್ತು ಚಿಕಿತ್ಸೆ ದೊರೆಯುತ್ತಿದೆ ಎಂದರು.

ಮಕ್ಕಳ ಹೃದ್ರೋಗತಜ್ಞರು, ಮಕ್ಕಳ ಹೃದಯ ಶಸ್ತ್ರಚಿಕಿತ್ಸಾ ತಜ್ಞರು ಹಾಗೂ ಹೃದಯ ಕಸಿ ಸೌಕರ್ಯಗಳನನು ಒದಗಿಸುವ ಮೂಲಕ ಹೃದ್ರೋಗ ಕೇಂದ್ರವನ್ನು ಇನ್ನಷ್ಟು ಸುಸಜ್ಜಿತಗೊಳಿಸಲಾಗಿದೆ. ಇದರಿಂದ ಈ ಮೊದಲು ದೂರದ ಬೆಂಗಳೂರು, ಮುಂಬಯಿಗಳಿಗೆ ಹೋಗುವ ರೋಗಿಗಳಿಗೆ ಹತ್ತಿರದಲ್ಲೇ ಎಲ್ಲಾ ರೀತಿಯ ಚಿಕಿತ್ಸಾ ಸೌಕರ್ಯಗಳು ದೊರೆಯುವಂತಾಗಿದೆ ಎಂದರು.

ಸುಟ್ಟಗಾಯ ಘಟಕದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ನುರಿತ ಜಠರ ಕರುಳು ತಜ್ಞರು ಮತ್ತು ಜಠರ ಕರುಳು ಮತ್ತು ಜೀರ್ಣಾಂಗ ಶಸ್ತ್ರಚಿಕಿತ್ಸಾ ತಜ್ಞರು, ಜಠರ ಕರುಳಿನ ಶರೀರ ವಿಜ್ಞಾನ ಪ್ರಯೋಗಾಲಯ ಮತ್ತು ಚಲನ ವಿಜ್ಞಾನ ಚಿಕಿತ್ಸಾಲಯ (ಮೊಟಿಲಿಟಿ ಕ್ಲಿನಿಕ್)ನ್ನು ಇದೀಗ ಕೆಎಂಸಿಯಲ್ಲಿ ಪ್ರಾರಂಭಿಸಲಾಗಿದೆ. ಇದರೊಂದಿಗೆ ದಿನದ 24 ಗಂಟೆ ತುರ್ತುಚಿಕಿತ್ಸೆ ಮತ್ತು ಕ್ರಿಟಿಕಲ್ ಕೇರ್ ವಿಭಾಗವೂ ಸೇವಾನಿರತವಾಗಿದೆ.ವೈದ್ಯರನ್ನು ತರಬೇತಿಗೊಳಿಸಲು ಪರಿಣಿತಿ ಪ್ರಯೋಗಾಲಯ (ಸ್ಕಿಲ್‌ಲ್ಯಾಬ್) ವ್ಯವಸ್ಥೆಯೂ ಇದೆ ಎಂದರು.

2019ನ್ನು ನಾವು ‘ರೋಗಿ ಕೇಂದ್ರಿತ ವರ್ಷ’ವೆಂದು ಆಚರಿಸಲಿದ್ದು, ಇದರ ಭಾಗವಾಗಿ ಆಸ್ಪತ್ರೆಯಲ್ಲಿ ಹಲವು ಹೊಸ ವಿಭಾಗಗಳನ್ನು ಮತ್ತು ಶಾಖೆಗಳನ್ನು ತೆರೆದಿದ್ದೇವೆ.ಪ್ರಶಾಮಕ ಔಷಧಿ ವಿಭಾಗ, ಭ್ರೂಣ ಸಂಬಂಧಿ ಔಷಧಿ ವಿಭಾಗ, ವೃದ್ಧಾಪ್ಯ ಚಿಕಿತ್ಸಾಲಯ, ಚಲನ ವಿಜ್ಞಾನ ಚಿಕಿತ್ಸಾಲಯ, ಮಕ್ಕಳ ಹೃದ್ರೋಗ ವಿಭಾಗ, ಮಕ್ಕಳ ರಕ್ತಕ್ಯಾನ್ಸರ್ ವಿಭಾಗ, ಜಠರಕರುಳಿನ ಚಿಕಿತ್ಸಾ ವಿಭಾಗ, ಹೃದಯ ವೈಫಲ್ಯ ಚಿಕಿತ್ಸಾ ವಿಭಾಗಗಳೂ ಸೇರಿವೆ ಎಂದರು.

ಇವುಗಳೊಂದಿಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಜನರ ಆರೋಗ್ಯಕ್ಕೆ ಸಂಬಂಧಿಸಿದ ಜಾರಿಗೆ ತರುವ ವಿವಿಧ ಆರೋಗ್ಯ ಯೋಜನೆಗಳ ಸೇವೆಯನ್ನು ಆಸ್ಪತ್ರೆಯಲ್ಲಿ ಒದಗಿಸಲಾಗುತ್ತಿದೆ.ವಿವಿಧ ಕಾರಣಗಳಿಂದ ಇವುಗಳ ಸೇವೆಯಲ್ಲಿ ಕೆಲವೊಮ್ಮೆ ವ್ಯತ್ಯಯ ಉಂಟಾದರೂ, ನಾವು ಈ ಸೇವೆಗಳನ್ನು ಮುತುವರ್ಜಿಯಿಂದಲೇ ನೀಡುತ್ತೇವೆ ಎಂದು ಡಾ.ಅವಿನಾಶ್ ಶೆಟ್ಟಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಆಸ್ಪತ್ರೆಯ ಮುಖ್ಯ ನಿರ್ವಹಣಾ ಅಧಿಕಾರಿ ಸಿ.ಜಿ. ಮುತ್ತಣ್ಣ, ಉಪವೈದ್ಯಕೀಯ ಅಧೀಕ್ಷಕ ಡಾ.ಪದ್ಮರಾಜ ಹೆಗ್ಡೆ, ಹಿರಿಯ ಮಾರುಕಟ್ಟೆ ವ್ಯವಸ್ಥಾಪಕ ಸಚಿನ ಕಾರಂತ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News