ಪಿಲಿಕುಳ ಲೇಕ್ ಗಾರ್ಡನ್‌ನಲ್ಲಿ ಮತ್ಸ್ಯೋತ್ಸವದಲ್ಲಿ ಪ್ರದರ್ಶನ-ಮಾರಾಟ

Update: 2019-07-21 13:33 GMT

ಮಂಗಳೂರು, ಜು.21: ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಹಾಗೂ ರಾಜ್ಯ ಮೀನುಗಾರಿಕಾ ಇಲಾಖೆಯ ಜಂಟಿ ಆಶ್ರಯದಲ್ಲಿ ರವಿವಾರ ಪಿಲಿಕುಳ ನಿಸರ್ಗಧಾಮದ ಲೇಕ್ ಗಾರ್ಡನ್‌ನಲ್ಲಿ ‘ಪಿಲಿಕುಳ ಮತ್ಸ್ಯೋತ್ಸವ ಮತ್ತು ಕ್ಷೇತ್ರೋತ್ಸವ’ ಕಾರ್ಯಕ್ರಮ ಜರುಗಿತು.

ಪಿಲಿಕುಳದಲ್ಲಿ ಬಲೆ ಬೀಸಿ ಮೀನು ಹಿಡಿಯುವ ಹಾಗೂ ಸಾವಿರಾರು ಮರಿ ಮೀನುಗಳನ್ನು ಬಿಡುವ ಮೂಲಕ ಮತ್ಸ್ಯೋತ್ಸವ ಉದ್ಘಾಟಿಸಲಾಯಿತು. ಮೀನುಗಾರಿಕಾ ಇಲಾಖೆಯಿಂದ 15,000 ಹಾಗೂ ಪಣಂಬೂರು ಬೀಚ್ ಪ್ರವಾಸೋದ್ಯಮ ಪ್ರಾಜೆಕ್ಟ್ ವತಿಯಿಂದ 10,000 ಮರಿ ಮೀನುಗಳನ್ನು ಬಿಡಲಾಯಿತು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ದ.ಕ.ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ ಮೀನು ಹಿಡಿಯುವುದು ಕರಾವಳಿ ಜನರ ವೃತ್ತಿಯಾಗಿದೆ. ಇಲ್ಲಿನ ಜನರ ಆಹಾರ ಪದ್ಧತಿಯಲ್ಲಿ ಮೀನಿಗೆ ಮಹತ್ವವಿದೆ. ಪಿಲಿಕುಳದಲ್ಲಿ ಮೀನುಗಳಿಗೆ ಉತ್ತಮ ಆಹಾರ ನೀಡಿ ಸಾಕಿ, ವರ್ಷಕ್ಕೊಂದು ಬಾರಿ ಮತ್ಸ್ಯೋತ್ಸವ, ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.

ಮೀನುಗಾರಿಕಾ ಮಹಾವಿದ್ಯಾಲಯ (ಮಂಗಳೂರು), ಮತ್ಸ್ಯ ಸಂಪನ್ಮೂಲ ನಿರ್ವಹಣೆ ವಿಭಾಗ, ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಮುದ್ರಿಸಿದ ‘ಜವಾಬ್ದಾರಿಯುತ ಮೀನುಗಾರಿಕೆ’ ಕೈಪಿಡಿಯನ್ನು ದ.ಕ. ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಯು.ಪಿ. ಇಬ್ರಾಹೀಂ ಬಿಡುಗಡೆಗೊಳಿಸಿದರು.

ವೇದಿಕೆಯಲ್ಲಿ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ದಿಲೀಪ್ ಕುಮಾರ್, ಮೀನುಗಾರಿಕಾ ಮೇಲ್ವಿಚಾರಕ ಬಸವರಾಜ್, ಪಿಲಿಕುಳ ಕಾರ್ಯನಿರ್ವಹಣಾ ನಿರ್ದೇಶಕಿ ಮೇಘನಾ, ನಿರ್ದೇಶಕ ಜಯಪ್ರಕಾಶ್ ಭಂಡಾರಿ, ಮೂಡುಶೆಡ್ಡೆ ಗ್ರಾಪಂ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಪಣಂಬೂರು ಬೀಚ್ ಪ್ರವಾಸೋದ್ಯಮ ಪ್ರಾಜೆಕ್ಟ್ ಸಿಇಒ ಯತೀಶ್ ಬೈಕಂಪಾಡಿ, ಕನ್ನಡ ಸಾಹಿತ್ಯ ಪರಿಷತ್ ದಕ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮೀನುಗಾರಿಕಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಮೃದುಲಾ ಹಾಗೂ ಡಾ. ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.
ಪಿಲಿಕುಳ ವಿಜ್ಞಾನ ಕೇಂದ್ರದ ಅಧಿಕಾರಿ ರಾಮಕೃಷ್ಣ ಮರಾಠಿ ಕಾರ್ಯಕ್ರಮ ನಿರೂಪಿಸಿದರು.

ಕಾಟ್ಲಾ ಮೀನಿನ ರಾಶಿ
ಪಿಲಿಕುಳದ ಕೊಳಕ್ಕೆ ಶನಿವಾರ ರಾತ್ರಿ ಬಲೆ ಹಾಕಲಾಗಿದ್ದು, ಬೆಳಗ್ಗಿನಿಂದಲೇ ಮೀನು ಎತ್ತುವ ಪ್ರಕ್ರಿಯೆ ಮುಂದುವರಿಯಿತು. ಬಲೆಗೆ ಬಿದ್ದ ಮೀನುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಟ್ಲಾ, ರೇವು, ತಿಲೇಪಿಯಾ ಮೀನುಗಳಿದ್ದವು. ಉಳಿದಂತೆ ಭಾರೀ ಗಾತ್ರದ ‘ಮುಗುಡು’ ಮೀನು ಬಲೆಗೆ ಬಿದ್ದಿದ್ದು, ಗ್ರಾಹಕರಿಂದ ಮೀನುಗಳಿಗೆ ಭಾರೀ ಬೇಡಿಕೆ ಕಂಡು ಬಂತು.

ಮೀನು ಖರೀದಿ-ಪ್ರದರ್ಶನ
ಕೊಳದಿಂದ ಮೀನುಗಳನ್ನು ತೆಗೆಯುವಾಗಲೇ ಗ್ರಾಹಕರು ಖರೀದಿಗೆ ಮುಂದಾದರು. ಒಂದೊಂದು ಮೀನು ಸುಮಾರು 20-30 ಕಿಲೋ ಇದ್ದವು. ಒಂದು ಕಿಲೋ ಮೀನಿಗೆ 150ರಿಂದ 200 ರೂ ನಿಗದಿಪಡಿಸಲಾಗಿತ್ತು. ಮೀನು ಮಾರಾಟ ಮತ್ತು ಪ್ರದರ್ಶನದ ಪಕ್ಕದಲ್ಲಿ ಮೀನುಗಾರಿಕಾ ಇಲಾಖೆ ವತಿಯಿಂದ ಇತರ ಮೀನುಗಳ ಮಾರಾಟ ವ್ಯವಸ್ಥೆಗೊಳಿಸಲಾಗಿತ್ತು. ವಿವಿಧ ಬಗೆಯ ಮೀನು ಖಾದ್ಯವನ್ನು ಮೀನುಪ್ರಿಯರು ಸವಿದು ಚಪ್ಪರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News