ಸಿಪಿಐನ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಡಿ. ರಾಜಾ

Update: 2019-07-21 13:37 GMT

ಹೊಸದಿಲ್ಲಿ,ಜು.21: ರಾಜ್ಯಸಭಾ ಸದಸ್ಯ ಡಿ.ರಾಜಾ ಅವರು ರವಿವಾರ ಸಿಪಿಐನ ನೂತನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಅವರ ಪೂರ್ವಾಧಿಕಾರಿ ಎಸ್.ಸುಧಾಕರ ರೆಡ್ಡಿ ಅವರು ಅನಾರೋಗ್ಯದಿಂದಾಗಿ ಹುದ್ದೆಯನ್ನು ತೊರೆದಿದ್ದರು.

ಪ್ರತಿಗಾಮಿ ಶಕ್ತಿಗಳ ವಿರುದ್ಧ ಪಕ್ಷದ ಹೋರಾಟ ಮುಂದುವರಿಯಲಿದೆ ಎಂದು ಈ ಸಂದರ್ಭ ಘೋಷಿಸಿದ ರಾಜಾ, “ಪ್ರಧಾನಿ ನರೇಂದ್ರ ಮೋದಿಯವರ ಫ್ಯಾಶಿಸ್ಟ್ ಆಡಳಿತದಡಿ ದೇಶವು ಗಂಭೀರ ಸ್ಥಿತಿಯ ಮೂಲಕ ಸಾಗುತ್ತಿದೆ. ಎಡಪಕ್ಷಗಳು ಲೋಕಸಭಾ ಚುನಾವಣೆಯಲ್ಲಿ ಸ್ಥಾನಗಳನ್ನು ಕಳೆದುಕೊಂಡಿರಬಹುದು ಮತ್ತು ಸಂಸತ್ತಿನಲ್ಲಿ ಸಣ್ಣ ಶಕ್ತಿಯಾಗಿರಬಹುದು,ಆದರೆ ನಾವು ದೇಶದಲ್ಲಿ ಕುಗ್ಗಿದ್ದೇವೆ ಅಥವಾ ನಮ್ಮ ಸೈದ್ಧಾಂತಿಕ ಅಥವಾ ರಾಜಕೀಯ ಪ್ರಭಾವ ಕುಗ್ಗಿದೆ ಎನ್ನುವುದು ಅದರ ಅರ್ಥವಲ್ಲ. ನಾವು ಈ ದೇಶದ ಜನರ ಆಶಾಕಿರಣವಾಗಿದ್ದೇವೆ. ಎಡಪಕ್ಷಗಳು ಹಾಲಿ ಸರಕಾರದ ಪ್ರತಿಗಾಮಿ ನೀತಿಗಳ ವಿರುದ್ಧದ ಹೋರಾಟವನ್ನು ಮುಂದುವರಿಸಲಿವೆ” ಎಂದರು.

 ‘ ಬಿಜೆಪಿ ಸರಕಾರವು ಚುನಾವಣಾ ಕಾಳಗದಲ್ಲಿ ಗೆದ್ದಿರಬಹುದು,ಆದರೆ ಸಾಮಾಜಿಕ ಅಥವಾ ರಾಜಕೀಯ ಕಾಳಗವನ್ನಲ್ಲ. ಎಲ್ಲ ಕಮ್ಯುನಿಸ್ಟ್ ಪಕ್ಷಗಳು ಒಟ್ಟಾಗಬೇಕೆಂದು ನಾವು ಬಯಸಿದ್ದೇವೆ. ನಮ್ಮ ಕಾರ್ಯತಂತ್ರಗಳನ್ನು ನಾವು ಮರುಪರಿಶೀಲಿಸಬೇಕಿದೆ ಮತ್ತು ನಮ್ಮ ಪಕ್ಷಗಳು ಈಗ ಅದನ್ನೇ ಮಾಡುತ್ತಿವೆ ’ಎಂದರು. ಇತ್ತೀಚಿಗೆ ನಡೆದ ಸಿಪಿಐ ರಾಷ್ಟ್ರೀಯ ಮಂಡಳಿಯ ಸಭೆಯಲ್ಲಿ ರಾಜಾ ಅವರನ್ನು ರೆಡ್ಡಿಯವರ ಉತ್ತರಾಧಿಕಾರಿಯನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News