ಮಂಗಳೂರು: ಡೆಂಗ್ ನಿಯಂತ್ರಣ ಬೃಹತ್ ಆಂದೋಲನ

Update: 2019-07-21 13:47 GMT

ಮಂಗಳೂರು, ಜು.21: ಡೆಂಗ್ ರೋಗ ನಿಯಂತ್ರಿಸಲು ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಮಹಾನಗರಪಾಲಿಕೆ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ನಗರದ ವಿವಿಧೆಡೆ ರವಿವಾರ ಬೃಹತ್ ಆಂದೋಲನ ಹಮ್ಮಿಕೊಳ್ಳಲಾಯಿತು.

ಡೆಂಗ್ ವ್ಯಾಪಕವಾಗಿ ಕಂಡುಬಂದಿರುವ ಗುಜ್ಜರಕೆರೆ, ಬೋಳಾರ, ಎಮ್ಮೆಕೆರೆ, ಮಹಾಕಾಲಿಪಡ್ಪು, ಮಂಗಳಾದೇವಿ ಪ್ರದೇಶಗಳನ್ನು ‘ಗ್ರಿಡ್ 1’ ಎಂದು ಪರಿಗಣಿಸಿ ವ್ಯವಸ್ಥಿತವಾಗಿ ರವಿವಾರ ಇಂತಹ ಪ್ರದೇಶಗಳಲ್ಲಿ ತೀವ್ರ ಪರಿಶೀಲನೆ, ತಪಾಸಣಾ ಚಟುವಟಿಕೆ ನಡೆಸಲಾಯಿತು. ಸುಮಾರು 250ಕ್ಕೂ ಅಧಿಕ ಸಿಬ್ಬಂದಿ, ಸ್ವಯಂ ಸೇವಕರು, ಅಧಿಕಾರಿಗಳು ಇದರಲ್ಲಿ ಭಾಗವಹಿಸಿದ್ದರು.

ಈ ಪ್ರದೇಶಗಳ ಮನೆ, ಉದ್ದಿಮೆ, ಅಂಗಡಿಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಲಾಯಿತು. ರೋಗ ನಿಯಂತ್ರಣ, ಸೊಳ್ಳೆ ಉತ್ಪತ್ತಿ ತಾಣಗಳಿಗೆ ಅವಕಾಶ ನೀಡದಂತೆ ಜಾಗೃತಿ ಮೂಡಿಸಲಾಯಿತು. ಅಲ್ಲದೆ, ಹಲವು ದಿನಗಳಿಂದ ನೀರು ನಿಂತು ಸೊಳ್ಳೆ ಉತ್ಪತ್ತಿಗೆ ಕಾರಣವಾದವರಿಗೆ ಸ್ಥಳದಲ್ಲೇ ದಂಡ ವಿಧಿಸಲಾಯಿತು. ರವಿವಾರ ಒಂದೇ ದಿನದಲ್ಲಿ 85 ಸಾವಿರ ರೂ. ದಂಡ ವಸೂಲಿ ಮಾಡಲಾಯಿತು.

ಸೊಳ್ಳೆತಾಣಗಳ ನಿರ್ಮೂಲನೆ: ನಗರದ ಗುಜ್ಜರಕೆರೆ ಪ್ರದೇಶವನ್ನು ಕೇಂದ್ರೀಕರಿಸಿಕೊಂಡು ನಗರದ ವಿವಿಧೆಡೆ ಸೊಳ್ಳೆಗಳು ಉತ್ಪತ್ತಿಯಾಗುವ ಸ್ಥಳದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಹಳೆ ಟೈರ್‌ಗಳಲ್ಲಿ ನಿಂತ ನೀರನ್ನು ತೆರವುಗೊಳಿಸಲಾಯಿತು. ನೀರಿನ ಟ್ಯಾಂಕ್‌ಗಳು, ಸಿಂಟೆಕ್ಸ್‌ಗಳು, ತೆಂಗಿನ ಚಿಪ್ಪು, ನೀರಿನ ಪ್ಲಾಸ್ಟಿಕ್ ಬಾಟಲ್‌ಗಳನ್ನು ಒಂದೆಡೆ ಸಂಗ್ರಹಿಸಿ ತೆರವುಗೊಳಿಸಲಾಯಿತು. ಆರೋಗ್ಯ ಇಲಾಖೆ ಸಿಬ್ಬಂದಿ ಸೊಳ್ಳೆತಾಣಗಳನ್ನು ನಿರ್ಮೂಲನೆ ಮಾಡಿದರು.

ಕರಾವಳಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಗರದ ವಿವಿಧೆಡೆಯ ಹಲವು ಬೀದಿಗಳಲ್ಲಿ ಸಣ್ಣಪುಟ್ಟ ತಗ್ಗು-ಹೊಂಡಗಳು ನಿರ್ಮಾಣವಾಗುತ್ತಿವೆ. ಇದರಿಂದ ಅಲ್ಲಲ್ಲಿ ಮಳೆ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ತಾಣಗಳಾಗಿ ಮಾರ್ಪಟ್ಟಿವೆ. ಇಂತಹ ಸ್ಥಳಗಳು ಗುರುತಿಸಿ ರಸ್ತೆಯನ್ನು ಮರಳು-ಕಲ್ಲು ಹಾಕಿ ಸಮಗೊಳಿಸುವ ಕಾರ್ಯ ನಡೆಯಿತು.

ಮಂಗಳೂರಿನ ಹಲವು ಸ್ಥಳಗಳಲ್ಲಿ ರಸ್ತೆ ಬದಿಯಲ್ಲಿ ಸುರಿಯುವ ತ್ಯಾಜ್ಯವನ್ನು ಆರೋಗ್ಯ ಇಲಾಖೆ ಸಿಬ್ಬಂದಿ ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ನಡೆಸಿದರು. ಅಂತಹ ಜಾಗದಲ್ಲಿ ನಿಲ್ಲುತ್ತಿದ್ದ ನೀರನ್ನು ಸರಾಗವಾಗಿ ಹರಿಯುವಂತೆ ಮಾಡಲಾಯಿತು. ಇನ್ನು ಕೆಲವು ಕಟ್ಟಡಗಳ ಮಹಡಿ ಮೇಲ್ಭಾಗದಲ್ಲಿ ನಿಲ್ಲುತ್ತಿದ್ದ ನೀರಿನ ಹರಿವನ್ನು ಸರಾಗಗೊಳಿಸಲಾಯಿತು.

ಮನೆಗಳ ಮುಂಭಾಗದಲ್ಲಿ ಇಂಟರ್‌ಲಾಕ್ ಅಳವಡಿಸಿರುವಂತಹ ಜಾಗದಲ್ಲಿ ಇಂಟರ್‌ಲಾಕ್‌ಗಳಲ್ಲಿ ನೀರು ನಿಂತು ಸೊಳ್ಳೆಗಳಿಗೆ ತವರು ಎನ್ನುವಂತೆ ಭಾಸವಾಗುತ್ತಿತ್ತು. ಸಂಬಂಧಿಸಿದ ಮನೆ ಮಾಲಕರಿಗೆ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಹಾಗೂ ಪರಿಸರ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಜಾಗೃತಿ ಮೂಡಿಸಿದರು.

ಮಂಗಳೂರು ನಗರದ ಹಲವು ರಸ್ತೆಗಳ ಇಕ್ಕೆಲದಲ್ಲಿ ಬೆಳೆದು ನಿಂತಿರುವ ಹುಲ್ಲನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಕತ್ತರಿಸಿ ಹಾಕಿದರು. ಕೆಲವೆಡೆ ಕಲ್ಲು, ಮಣ್ಣು, ಹೂಳಿನಿಂದ ತುಂಬಿಕೊಂಡು ತ್ಯಾಜ್ಯ ನೀರು ಸ್ಥಳದಲ್ಲೇ ನಿಂತು ವಾಸನೆ ಬೀರುತ್ತಿತ್ತು. ತ್ಯಾಜ್ಯ, ಕಲ್ಲು-ಮಣ್ಣು ಹೊರತೆಗೆದು ಸ್ವಚ್ಛಗೊಳಿಸಲಾಯಿತು. ಈ ವೇಳೆ ಸಂಗ್ರಹಿಸಿದ ತ್ಯಾಜ್ಯವನನು ಮನಪಾ ವಾಹನಗಳಲ್ಲಿ ಸಾಗಿಸಲಾಯಿತು.

ಗುಜ್ಜರಕೆರೆಯ ದಂಡೆಯಲ್ಲಿ ಬೆಳೆದಿದ್ದ ಅನಗತ್ಯ ಕಸ-ಕಡ್ಡಿ, ತ್ಯಾಜ್ಯದಂತಹ ಹುಲ್ಲು-ಸಸ್ಯಗಳನ್ನು ಕಿತ್ತು ಸ್ವಚ್ಛಗೊಳಿಸಲಾಯಿತು. ಸಣ್ಣಪುಟ್ಟ ತಗ್ಗುಗಳಲ್ಲಿ ನಿಂತ ನೀರನ್ನು ಹರಿಯುವಂತೆ ಮಾಡಲಾಯಿತು. ಇನ್ನು, ಕೆಲ ತಗ್ಗು-ಗುಂಡಿಗಳನ್ನು ಮಣ್ಣಿನಿಂದ ಮುಚ್ಚಿ ನೀರು ನಿಲ್ಲದಂತೆ ಮಾಡಲಾಯಿತು.

ಸ್ವಚ್ಛತಾ ಕಾರ್ಯಾಚರಣೆಯ ಸ್ಥಳಕ್ಕೆ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್, ಮಂಗಳೂರು ತಾಲೂಕು ತಹಶೀಲ್ದಾರ್ ಗುರುಪ್ರಸಾದ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

71 ಸೊಳ್ಳೆ ಉತ್ಪಾದನಾ ತಾಣ ನಾಶ:

ಮಂಗಳೂರು ನಗರದ ಗುಜ್ಜರಕೆರೆ, ಜೆಪ್ಪು, ಬೋಳಾರ ವ್ಯಾಪ್ತಿಯಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು. ಕಾರ್ಯಾಚರಣೆಯಲ್ಲಿ ಒಟ್ಟು 71 ಸೊಳ್ಳೆ ತಾಣಗಳನ್ನು ನಿರ್ಮೂಲನೆ ಮಾಡಲಾಯಿತು.

ಮಂಗಳಾದೇವಿ ಸಮೀಪದ ಪೆಟ್ರೋಲ್ ಬಂಕ್ ಸಮೀಪ ಸೊಳ್ಳೆಗಳು ಉತ್ಪತ್ತಿಯಾಗುವ ತೆರೆದ ಜಾಗಗಳನ್ನು ಗುರುತಿಸಿ ಸಂಬಂಧಿಸಿದವರಿಗೆ ಸೂಚನೆ ನೀಡಲಾಯಿತು. ಜೆಪ್ಪು ಆರೋಗ್ಯ ಕೇಂದ್ರ ಹಾಗೂ ಕುಲಾಲ್ ಭವನ ಸಮೀಪದ ಕಟ್ಟಡ ನಿರ್ಮಾಣ ಪ್ರದೇಶದಲ್ಲಿ ಒಟ್ಟು ಮೂರು ಸೊಳ್ಳೆ ಉತ್ಪಾದನಾ ತಾಣಗಳನ್ನು ನಾಶಪಡಿಸಲಾಯಿತು.

ಕುಲಾಲ್‌ಭವನ ಸಮೀಪದ ವೆಕೆಂಟ್ ಸೈಟ್ ಸುತ್ತಮುತ್ತ ಕಾರ್ಯಾಚರಣೆ ನಡೆಸಿ ನಾಲ್ಕು ಸೊಳ್ಳೆತಾಣಗಳ ನಾಶ, ಕುಲಾಲ್‌ಭವನ ಸಮೀಪದ ಪೋಸ್ಟ್ ಮ್ಯಾಟ್ರಿಕ್ ಬಾಲಕರ ವಸತಿ ನಿಲಯ ಬಳಿ 10 ತಾಣಗಳು, ಮಂಗಳಾದೇವಿ ಸಮೀಪದ ಚರ್ಚ್ ಹಾಗೂ ಶಾದಿ ಮಹಲ್ ಸಮೀಪದ ನಿರ್ಮಾಣ ಹಂತದ ಕಟ್ಟಡಗಳಲ್ಲಿನ ಐದು ಸೊಳ್ಳೆ ತಾಣಗಳನ್ನು ತೆರವುಗೊಳಿಸಲಾಯಿತು.

ಬೋಳಾರ ಹಿರಿಯ ಪ್ರಾಥಮಿಕ ಶಾಲೆ, ಮುಳಿಹಿತ್ಲು, ಬಿಇಒ ಕಚೇರಿ, ಮಂಗಳಾದೇವಿ ದೇವಸ್ಥಾನ, ಭಗಿನಿ ಸಮಾಜ ಅಂಗನವಾಡಿ, ವಿಜಯಾಲಯ ಸ್ಕೂಲ್, ಕಾಸಿಯಾ ಸ್ಕೂಲ್ ಸಮೀಪದ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಇದರಲ್ಲಿ 14 ತೆರೆದ ಪ್ರದೇಶ, 10 ಸರಕಾರಿ ಕಟ್ಟಡ ಪ್ರದೇಶ, ಎಂಟು ವಾಣಿಜ್ಯ ಪ್ರದೇಶಗಳು ಸೇರಿದಂತೆ ನಗರದ ವಿವಿಧೆಡೆ ಒಟ್ಟು 71 ಸೊಳ್ಳೆ ಉತ್ಪತ್ತಿ ತಾಣಗಳನ್ನು ಆರೋಗ್ಯ ಇಲಾಖೆ ಸಿಬ್ಬಂದಿ ನಾಶಗೊಳಿಸಿದರು.

ಸಾಂಕ್ರಾಮಿಕ ರೋಗಗಳ ಕಡಿವಾಣಕ್ಕೆ ಜಿಲ್ಲಾಡಳಿತ ಸಜ್ಜುಗೊಂಡಿದೆ. ಜಿಲ್ಲಾಧಿಕಾರಿಯೇ ಈ ಎಲ್ಲ ಚಟುವಟಿಕೆಗಳ ಮೇಲುಸ್ತುವಾರಿ ವಹಿಸಿದ್ದು, ಪ್ರತೀದಿನ ಸಂಜೆ 7 ಗಂಟೆಗೆ ಈ ಸಂಬಂಧ ಸಭೆ ನಡೆಸಿ, ಪರಿಶೀಲನೆ ನಡೆಸಲಾಗುತ್ತಿದೆ.
- ಸಸಿಕಾಂತ್ ಸೆಂಥಿಲ್, ಜಿಲ್ಲಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News