ಬೀದಿ ಮಾರಾಟಗಾರರು ಮಾಂಸ ಮಾರಾಟ ಮಾಡಲು ಯಾವ ಕಾನೂನಿನಡಿ ಪರವಾನಿಗೆ ಪಡೆಯಬೇಕಿದೆ ?

Update: 2019-07-21 13:47 GMT

ಹೊಸದಿಲ್ಲಿ,ಜು.21: ಬೀದಿ ಮಾರಾಟಗಾರರು ಮಾಂಸ ಮತ್ತು ಮಾಂಸ ಉತ್ಪನ್ನಗಳನ್ನು ಮಾರಾಟ ಮಾಡಲು ಯಾವ ಕಾನೂನಿನಡಿ ಪರವಾನಿಗೆಯನ್ನು ಪಡೆದುಕೊಳ್ಳಬೇಕಾದ ಅಗತ್ಯವಿದೆ ಎಂದು ದಿಲ್ಲಿ ಉಚ್ಚ ನ್ಯಾಯಾಲಯವು ಉತ್ತರ ದಿಲ್ಲಿ ಮಹಾನಗರ ಪಾಲಿಕೆಯನ್ನು ಪ್ರಶ್ನಿಸಿದೆ.

ಬೀದಿ ಮಾರಾಟಗಾರರು ಪರವಾನಿಗೆಯಿಲ್ಲದೆ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಲು ಯಾವ ಕಾನೂನು ನಿಮಗೆ ಅಧಿಕಾರ ನೀಡಿದೆ? ನೀವು ಈ ಬಗ್ಗೆ ನೀತಿಯೊಂದನ್ನು ಹೊಂದಿದ್ದೇವೆಂದು ಹೇಳಿಕೊಂಡರೆ ಅದಕ್ಕೆ ಯಾವ ಅರ್ಥವೂ ಇಲ್ಲ ಎಂದು ನ್ಯಾ.ವಿಭು ಬಖ್ರು ಹೇಳಿದರು.

ಅಂತಹ ಕಾನೂನೇನಾದರೂ ಇದ್ದರೆ ಅದನ್ನು ನ್ಯಾಯಾಲಯದಲ್ಲಿ ಮಂಡಿಸಲು ಮಹಾನಗರ ಪಾಲಿಕೆಯ ನ್ಯಾಯವಾದಿ ಮೋನಿಕಾ ಅರೋರಾ ಸಮಯಾವಕಾಶವನ್ನು ಕೋರಿದಾಗ,ನ್ಯಾಯಾಲಯವು ಜು.22ರವರೆಗೆ ಗಡುವು ನೀಡಿತು.

ಬೀದಿ ಮಾರಾಟಗಾರರ (ಜೀವನೋಪಾಯ ರಕ್ಷಣೆ ಮತ್ತು ಬೀದಿ ಮಾರಾಟ ನಿಯಂತ್ರಣ) ಕಾಯ್ದೆ,2014ರಡಿ ತಮಗೆ ಮಾರಾಟ ಪ್ರಮಾಣಪತ್ರ ದೊರೆಯುವವರೆಗೆ ತಾವೀಗ ವ್ಯಾಪಾರ ನಡೆಸುತ್ತಿರುವ ಇಲ್ಲಿಯ ಮಹೇಂದ್ರ ಪಾರ್ಕ್‌ನಿಂದ ತಮ್ಮನ್ನು ಎತ್ತಂಗಡಿಗೊಳಿಸದಂತೆ ಮಹಾನಗರ ಪಾಲಿಕೆಗೆ ನಿರ್ದೇಶ ಕೋರಿ ಬೀದಿ ಮಾರಾಟಗಾರರ ಸಂಘವು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಕೈಗೆತ್ತಿಕೊಂಡಿದೆ.

ಕಾಯ್ದೆಯಲ್ಲಿನ ನಿಯಮಗಳಿಗೆ ಅನುಗುಣವಾಗಿ ಸಮೀಕ್ಷೆಯನ್ನು ನಡೆಸಿ ಯೋಜನೆಯೊಂದನ್ನು ರೂಪಿಸಿದ ಹೊರತು ತಮ್ಮನ್ನು ತೆರವುಗೊಳಿಸುವಂತಿಲ್ಲ ಎಂದು ಸಂಘವು ತನ್ನ ಅರ್ಜಿಯಲ್ಲಿ ವಾದಿಸಿದೆ.

ಬೀದಿ ಮಾರಾಟಗಾರರು ಫುಟ್‌ ಪಾತ್‌ಗಳಲ್ಲಿ ಕುಳಿತುಕೊಂಡು ವ್ಯಾಪಾರ ನಡೆಸುತ್ತಿದ್ದಾರೆ ಮತ್ತು ಇದರಿಂದ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿದೆ ಎಂದು ಅರೋರಾ ವಿಚಾರಣೆ ಸಂದರ್ಭ ವಾದಿಸಿದ್ದರು.

ಬೀದಿ ಮಾರಾಟಗಾರರು ಅನೈರ್ಮಲ್ಯಕರ ಸ್ಥಿತಿಯಲ್ಲಿ ಮಾಂಸ ಮಾರಾಟ ಮಾಡುತ್ತಿದ್ದಾರೆ ಮತ್ತು ಇದು ಅವರನ್ನು ತೆರವುಗೊಳಿಸಲು ತನಗೆ ಹಕ್ಕು ನೀಡಿದೆ ಎಂದೂ ಮಹಾನಗರ ಪಾಲಿಕೆ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News