ಉ.ಪ್ರದೇಶ ಅಬಕಾರಿ ಇಲಾಖೆಯಲ್ಲಿ 24,805 ಕೋಟಿ ರೂ. ಅವ್ಯವಹಾರ ಬೆಳಕಿಗೆ

Update: 2019-07-21 14:05 GMT

ಲಕ್ನೊ, ಜು.21: ಉತ್ತರಪ್ರದೇಶದ ಅಬಕಾರಿ ಇಲಾಖೆಯಲ್ಲಿ 2008ರಿಂದ 2018ರ ಅವಧಿಯಲ್ಲಿ 24,805 ಕೋಟಿ ರೂ. ಮೊತ್ತದ ಅವ್ಯವಹಾರ ನಡೆದಿರುವುದನ್ನು ನಿಯಂತ್ರಕ ಮತ್ತು ಮಹಾಲೆಕ್ಕಪಾಲರು(ಸಿಎಜಿ) ಪತ್ತೆಹಚ್ಚಿದ್ದಾರೆ.

ಶುಕ್ರವಾರ ಉತ್ತರಪ್ರದೇಶ ವಿಧಾನಸಭೆಯಲ್ಲಿ 2018ರ ಸಾಲಿನಲ್ಲಿ ಅಬಕಾರಿ ಇಲಾಖೆಯ ಲೆಕ್ಕಪತ್ರದ ವಿವರದ ಜೊತೆ ಸಿಎಜಿ ವರದಿಯನ್ನು ಮಂಡಿಸಲಾಗಿದೆ. ವರದಿಯಲ್ಲಿ ತಿಳಿಸಲಾದ ಪ್ರಮುಖ ಅಂಶಗಳಲ್ಲಿ , ನೆರೆಯ ರಾಜ್ಯಗಳಿಂದ ಉ.ಪ್ರದೇಶಕ್ಕೆ ಸಾರಾಯಿ ಅಕ್ರಮ ಸಾಗಣೆಯನ್ನು ತಡೆಯಲು ಮೀರತ್‌ನಲ್ಲಿ 2009-10ರ ಸಾಲಿನಲ್ಲಿ ನಿಯಮಬಾಹಿರವಾಗಿ ಆರಂಭಿಸಲಾಗಿದ್ದ ವಿಶೇಷ ಕೇಂದ್ರಗಳಿಂದ ಏನೂ ಪ್ರಯೋಜನವಾಗದಿದ್ದರೂ ಅವುಗಳನ್ನು 9 ವರ್ಷ ಮುಂದುವರಿಸಿರುವ ಬಗ್ಗೆ ಬೊಟ್ಟು ಮಾಡಲಾಗಿದೆ. ಚಿಲ್ಲರೆ ಮಾರಾಟ ಮಳಿಗೆಗಳನ್ನು ವಾರ್ಷಿಕವಾಗಿ ಟೆಂಡರ್ ಆಹ್ವಾನಿಸದೆ 9 ವರ್ಷ ನಿರಂತರವಾಗಿ ಲೈಸೆನ್ಸ್ ನವೀಕರಿಸಿರುವುದು, ಅಲ್ಲದೆ ಡಿಸ್ಟಿಲ್ಲರಿಗಳಿಗೆ ಐಎಂಎಫ್‌ಎಲ್ (ಇಂಡಿಯನ್ ಮೇಡ್ ಫಾರಿನ್ ಲಿಕರ್) ಮತ್ತು ಬಿಯರ್ ದರಗಳನ್ನು ಮನಬಂದಂತೆ ನಿಗದಿಗೊಳಿಸಲು ಅವಕಾಶ ನೀಡಲಾಗಿದೆ.

ಇದರಿಂದ ರಾಜ್ಯದ ಬೊಕ್ಕಸಕ್ಕೆ 5,525 ಕೋಟಿ ರೂ. ನಷ್ಟವಾಗಿದೆ. 10 ವರ್ಷಗಳಿಂದ ನಡೆದು ಬರುತ್ತಿದ್ದ ಈ ಅಕ್ರಮವನ್ನು ಅಬಕಾರಿ ಇಲಾಖೆ ಪತ್ತೆಹಚ್ಚದ ಕಾರಣ 2008-18ರ ಅವಧಿಯಲ್ಲಿ 227.98 ಕೋಟಿ ರೂ. ಮೊತ್ತದ ಹೆಚ್ಚುವರಿ ಅಬಕಾರಿ ತೆರಿಗೆ ನಷ್ಟವಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News