ಕೃಷಿಯತ್ತ ಉಡುಪಿ ಧರ್ಮಪ್ರಾಂತ್ಯದ ಯುವ ಜನತೆ

Update: 2019-07-21 14:29 GMT

ಉಡುಪಿ, ಜು.21: ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯ ಪರಿಸರ ಪ್ರೀತಿಯೊಂದಿಗೆ ಕೃಷಿಗೆ ಮಹತ್ವ ನೀಡುವ ನಿಟ್ಟಿನಲ್ಲಿ ಕ್ರೈಸ್ತರ ಪರಮೋಚ್ಛ ಗುರು ಪೋಪ್ ಫ್ರಾನ್ಸಿಸ್ ನೀಡಿದ ಪರಿಸರ ಪ್ರೀತಿಯ ಸಂದೇಶವನ್ನು ಪಾಲಿಸುವುದರೊಂದಿಗೆ ಪಾಳು ಬಿದ್ದ ಭೂಮಿಯಲ್ಲಿ ನಾಟಿ ಮಾಡುವುದರ ಮೂಲಕ ಕೃಷಿಯತ್ತ ಯುವಜನತೆಯನ್ನು ಆಕರ್ಷಿಸುವ ಕೆಲಸಕ್ಕೆ ಕೈ ಹಾಕಿದೆ.

ಉಡುಪಿ ಧರ್ಮಪ್ರಾಂತ್ಯದ 54 ಚರ್ಚ್‌ಗಳಲ್ಲಿರುವ ಭಾರತೀಯ ಕೆಥೊಲಿಕ್ ಯುವ ಸಂಚಾಲನದ ಯುವಕರ ಮೂಲಕ ಅವರವರ ಚರ್ಚ್‌ಗಳ ವ್ಯಾಪ್ತಿ ಯಲ್ಲಿ ಪಾಳು ಬಿದ್ದಿರುವ ಗದ್ದೆಗಳನ್ನು ಗುರುತಿಸಿ ಅಥವಾ ಕೃಷಿ ಮಾಡುತ್ತಿರುವ ಗದ್ದೆಗಳಲ್ಲಿ ಯುವಜನತೆ ಸ್ವತಃ ತಾವೇ ನೇಜಿ ನಾಟಿ ಮಾಡುವುದರ ಮೂಲಕ ಪರಿಸರ ಜಾಗೃತಿಗಾಗಿ ಹಾಗೂ ಕೃಷಿ ಉಳಿವಿಗಾಗಿ ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ.

ಉಡುಪಿ ಜಿಲ್ಲೆಯ ಕ್ರೈಸ್ತ ಯುವಜನರು ತಮ್ಮ ಸಂಘಟನೆಯಾದ ಐಸಿವೈಎಂ ನೇತೃತ್ವದಲ್ಲಿ ಈಗಾಗಲೇ ಕೃಷಿ ಮಾಡುವ ಮಾದರಿ ಕೆಲಸಕ್ಕೆ ಮುಂದಾಗಿದ್ದಾರೆ. ಧರ್ಮಪ್ರಾಂತ್ಯ ವ್ಯಾಪ್ತಿಯಲ್ಲಿ ಸುಮಾರು 8-10 ಚರ್ಚ್‌ಗಳಲ್ಲಿ ಈ ಕಾರ್ಯ ಮುಗಿದಿದ್ದು ಜು.21ರಂದು ಉಡುಪಿ ಸಮೀಪದ ಕಲ್ಮಾಡಿ ಚರ್ಚಿನ ಯುವಕ ಯುವತಿಯರು ಉತ್ಸಾಹದಿಂದ ಗದ್ದೆಗಿಳಿದು ನೇಜಿ ನಾಟಿ ಮಾಡಿದರು.

ಹೆಚ್ಚಿನ ಯುವಜನರಿಗೆ ನೇಜಿ ನಾಟಿ ಮಾಡುವುದು ಮೊದಲ ಅನುಭವ ಆಗಿರುವುದರಿಂದ ಕೃಷಿಯಲ್ಲಿ ಅನುಭವ ಹೊಂದಿದ ಹಿರಿಯರು ನಾಟಿ ಮಾಡುವ ಬಗ್ಗೆ ಹೇಳಿ ಕೊಟ್ಟರು. ಹಿರಿಯರು ಮಾರ್ಗದರ್ಶನದಂತೆ ಯುವಕ ಯುವತಿಯರು ಉತ್ಸಾಹದಿಂದ ನಾಟಿ ಕೆಲಸವನ್ನು ಪೊರೈಸಿದರು.

ಪ್ರತಿ ಚರ್ಚ್‌ಗಳಲ್ಲಿ ಈ ಕೃಷಿ ಕೆಲಸದ ಜಾಗೃತಿ ನಡೆಯುತ್ತಿದ್ದು ಪ್ರತಿ ರವಿವಾರ ಒಂದೊಂದು ಚರ್ಚ್‌ಗಳ ಯುವಜನತೆ ತಮ್ಮ ಚರ್ಚ್ ವ್ಯಾಪ್ತಿಯಲ್ಲಿ ಈ ಕೆಲಸದಲ್ಲಿ ಭಾಗಿಯಾಗುತ್ತಿದ್ದು ಧರ್ಮಪ್ರಾಂತ್ಯದಾದ್ಯಂತ ಎಕರೆ ಗಟ್ಟಲೆ ಪಾಳು ಭೂಮಿಯಲ್ಲಿ ಕೃಷಿಯ ಮೂಲಕ ಹಸಿರು ಮಾಡುವ ಕೆಲಸ ನಡೆಯುತ್ತಿದೆ ಎಂದು ಐಸಿವೈಎಂ ಉಡುಪಿ ಧರ್ಮಪ್ರಾಂತ್ಯದ ಅಧ್ಯಕ್ಷ ಡಿಯೊನ್ ಡಿಸೋಜ ತಿಳಿಸಿದ್ದಾರೆ.

ಬೆಳಿಗ್ಗೆ ಚರ್ಚಿನಲ್ಲಿ ಪೂಜೆಯಲ್ಲಿ ಭಾಗವಹಿಸಿ ಬಳಿಕ ಗದ್ದೆಗೆ ತೆರಳಿ ಕೃಷಿಯಲ್ಲಿ ಯುವಜನತೆ ಮಧ್ಯಾಹ್ನದ ತನಕ ತೊಡಗಿಸಿಕೊಳ್ಳುತ್ತಿದ್ದಾರೆ. ಯುವಜನ ರೊಂದಿಗೆ ಸ್ಥಳೀಯ ಚರ್ಚಿನ ಧರ್ಮಗುರುಗಳು ಕೂಡ ಗದ್ದೆಗಿಳಿದು ನೇಜಿ ನಾಟಿ ಮಾಡುತಿದ್ದಾರೆ. ಇದು ಕೇವಲ ಒಂದು ವರ್ಷಕ್ಕೆ ಸೀಮಿತವಾಗಿರಿಸಿದೆ ಪ್ರತಿ ವರ್ಷವೂ ಮುಂದುವರೆಸಿಕೊಂಡು ಹೋಗಲಾಗುತ್ತದೆ. ಯುವಜನತೆ ಕೃಷಿಯಿಂದ ವಿಮುಖರಾಗುತ್ತಿರುವ ಈ ಸಂದರ್ಭದಲ್ಲಿ ಈ ರೀತಿಯ ಯೋಜನೆ ಮತ್ತೆ ನಮ್ಮ ಯುವಕರನ್ನು ಕೃಷಿಯತ್ತ ಆಕರ್ಷಿಸಲು ಒಂದು ಪ್ರಯತ್ನವಾಗಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News