×
Ad

ಸಂಸದೆಯಾಗಿದ್ದು ಶೌಚಾಲಯ ಸ್ವಚ್ಛಗೊಳಿಸಲು ಅಲ್ಲ ಎಂದ ಪ್ರಜ್ಞಾ ಸಿಂಗ್

Update: 2019-07-21 21:40 IST

ಹೊಸದಿಲ್ಲಿ, ಜು.21: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ‘ಸ್ವಚ್ಛ ಭಾರತ’ ಅಭಿಯಾನವನ್ನು ಅಣಕಿಸುವ ರೀತಿಯಲ್ಲಿ ಹೇಳಿಕೆ ನೀಡಿರುವ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್, ತನ್ನನ್ನು ಸಂಸದೆಯಾಗಿ ಜನತೆ ಆಯ್ಕೆ ಮಾಡಿರುವುದು ಚರಂಡಿ ಅಥವಾ ಶೌಚಾಲಯ ಸ್ವಚ್ಛಗೊಳಿಸಲು ಅಲ್ಲ ಎಂದಿದ್ದಾರೆ.

“ಚರಂಡಿಯನ್ನು ಸ್ವಚ್ಛಗೊಳಿಸಲು ಜನರು ನನ್ನನ್ನು ಆಯ್ಕೆ ಮಾಡಿಲ್ಲ, ಅಥವಾ ನಿಮ್ಮ ಶೌಚಾಲಯವನ್ನು ಸ್ವಚ್ಛಗೊಳಿಸಲು ಜನತೆ ನನ್ನನ್ನು ಆಯ್ಕೆ ಮಾಡಿಲ್ಲ” ಎಂದು ಪ್ರಜ್ಞಾ ಹೇಳುತ್ತಿರುವ ವೀಡಿಯೊ ಈಗ ವೈರಲ್ ಆಗಿದೆ. ತನ್ನ ಕಚೇರಿಯಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ ಎನ್ನಲಾಗಿದ್ದು, ಇವರ ಮಾತು ಕೇಳಿ ಎದುರಿಗೆ ನಿಂತಿದ್ದವರು ಜೋರಾಗಿ ಕರತಾಡನ ಮಾಡಿದ್ದಾರೆ.

ಬಳಿಕ ಮಾತು ಮುಂದುವರಿಸಿದ್ದ ಪ್ರಜ್ಞಾ ಸಿಂಗ್, “ನನಗೆ ವಹಿಸಿಕೊಟ್ಟಿರುವ ಕರ್ತವ್ಯವನ್ನು ನಿರ್ವಹಿಸುತ್ತೇನೆ” ಎಂದು ಹೇಳಿದ್ದಾರೆ. ಕಳೆದ ವಾರವಷ್ಟೇ ಸಂಸದರು ಪೊರಕೆ ಹಿಡಿದು ಸಂಸತ್ತಿನ ಆವರಣದ ರಸ್ತೆ ಗುಡಿಸುವ ಮೂಲಕ ಸ್ವಚ್ಛತಾ ಅಭಿಯಾನವನ್ನು ಮುಂದುವರಿಸಿದ್ದರೆ, ಇದನ್ನು ಅಣಕಿಸುವ ರೀತಿಯಲ್ಲಿ ಪ್ರಜ್ಞಾ ಸಿಂಗ್ ಹೇಳಿಕೆ ನೀಡಿ ಮತ್ತೊಂದು ವಿವಾದ ಹುಟ್ಟುಹಾಕಿದ್ದಾರೆ. ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಪ್ರಜ್ಞಾ ಸಿಂಗ್, ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭ ಮಹಾತ್ಮಾ ಗಾಂಧೀಜಿಯವರ ಹಂತಕ ಗೋಡ್ಸೆ ಓರ್ವ ರಾಷ್ಟ್ರಭಕ್ತ ಎಂದು ಹೇಳಿದ್ದರು.

2008ರ ಮಾಲೆಗಾಂವ್ ಬಾಂಬ್‌ ಸ್ಫೋಟ ಪ್ರಕರಣದ ಆರೋಪಿಯಾಗಿರುವ ಪ್ರಜ್ಞಾ ಸಿಂಗ್, ಈಗ ಜಾಮೀನು ಪಡೆದಿದ್ದು ಮುಂಬೈ ನ್ಯಾಯಾಲಯದಲ್ಲಿ ಪ್ರಕರಣ ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News