ಮೂಡುಬಿದಿರೆ: ಐತಿಹಾಸಿಕ ಶ್ರೀ ಕ್ಷೇತ್ರ ಪುತ್ತಿಗೆ ಜೀರ್ಣೋದ್ಧಾರ ಸಮಾಲೋಚನಾ ಸಭೆ

Update: 2019-07-21 18:19 GMT

ಮೂಡುಬಿದಿರೆ: ಪುತ್ತಿಗೆಯ ಮಹತೋಭಾರ ಶ್ರೀ ಕ್ಷೇತ್ರ ಸೋಮನಾಥೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಪ್ರಕ್ರಿಯೆ ಪ್ರಗತಿಯಲ್ಲಿದ್ದು , ದೇವಳದ ಸಮಗ್ರ ಅಭಿವೃದ್ಧಿಗೆ ರೂ.15 ಕೋಟಿ ವೆಚ್ಚವಾಗಲಿದೆ. ಇದಲ್ಲದೆ ಈ ಹಿಂದೆ ನಶಿಸಿ ಹೋದ ಭೂಮಂಡಲ ರಥ ಮತ್ತೆ ನಿರ್ಮಾಣ ಮಾಡಬೇಕಾಗಿದೆ. ಭಕ್ತರ ಸಹಕಾರದಿಂದ ಇತಿಹಾಸ ಪ್ರಸಿದ್ಧ ದೇವಳ ಅಭಿವೃದ್ಧಿಯಾಗಬೇಕಾಗಿದೆ. ಇದಕ್ಕಾಗಿ ಕ್ಷೇತ್ರದ ಎಲ್ಲೆಡೆಯ ಭಕ್ತರು ಸಹಕರಿಸುವಂತೆ ದೇವಳದ ಆನುವಂಶಿಕ ಆಡಳಿತ ಮೊಕ್ತೇಸರ ಚೌಟರ ಅರಮನೆಯ ಕುಲದೀಪ ಎಂ. ಮನವಿ ಮಾಡಿಕೊಂಡರು. 

ಶ್ರೀ ದೇವಳದ ಜೀರ್ಣೋದ್ಧಾರ ಸಮಿತಿ ಆಶ್ರಯದಲ್ಲಿ ರವಿವಾರ ಇಲ್ಲಿನ ಕನ್ನಡಭವನದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು ಪ್ರಶ್ನೆ ಪ್ರಕಾರ ಕಂಡು ಬಂದಂತೆ ಮಹಿಷಮರ್ಧಿನಿ ಹಾಗೂ ಸೋಮನಾಥೇಶ್ವರ ದೇವರಿಗೆ ಆರಾಧನೆಗೆ ಕ್ಷೇತ್ರದಲ್ಲಿ ಸಮಾನ ಅವಕಾಶ ಕಲ್ಪಿಸಲಾಗುವುದು ಎಂದರು. 

ಸಮಿತಿಯ ಕಾರ್ಯಾಧ್ಯಕ್ಷ, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಅಧ್ಯಕ್ಷತೆವಹಿಸಿ ಮಾತನಾಡಿ, ಜೀಣೋದ್ಧಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಗ್ರಾಮಸಮಿತಿ ರಚಿಸಲಾಗಿದೆ. ಪುರಸಭಾ ವ್ಯಾಪ್ತಿಯ 20 ವಾರ್ಡ್‍ಗಳಲ್ಲಿ ವಾರ್ಡ್ ಸಮಿತಿ ರಚಿಸಿ, ಅಲ್ಲಿ ಕನಿಷ್ಠ ರೂ.25 ಲಕ್ಷ ದೇಣಿಗೆ ಸಂಗ್ರಹಣೆಯಾಗುವ ಪ್ರಯತ್ನವಾಗಬೇಕಾಗಿದೆ ಎಂದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ.ಎಂ ಮೋಹನ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ, ದೇವಳದ ಅಭಿವೃದ್ಧಿಗೆ ಮೂಡುಬಿದಿರೆ ಜನರ ಸಹಕಾರ ಅತ್ಯಗತ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ತಮ್ಮಿಂದಾಗುವಷ್ಟು ಉದಾರ ದೇಣಿಗೆ ನೀಡಬೇಕೆಂದು ಮನವಿ ಮಾಡಿದರು. 

ದೇವಳದ ಪ್ರಧಾನ ಅರ್ಚಕ, ಸಮಿತಿಯ ಉಪಾಧ್ಯಕ್ಷ ಅಡಿಗಳ್ ಶ್ರೀನಿವಾಸ್ ಭಟ್, ಉಪಾಧ್ಯಕ್ಷರಾದ ಶಿವಪ್ರಸಾದ್ ಆಚಾರ್ಯ, ಧನಕೀರ್ತಿ ಬಲಿಪ ಎಚ್., ಜೊತೆ ಕಾರ್ಯದರ್ಶಿ ವಿದ್ಯಾ ರಮೇಶ್ ಭಟ್, ಎಂ.ಸಿ.ಎಸ್ ಬ್ಯಾಂಕ್‍ನ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ. ಉಪಸ್ಥಿತರಿದ್ದರು. ಜಿ.ಪಂ ಸದಸ್ಯ ಕೆ.ಪಿ ಸುಚರಿತ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ ಜಗದೀಶ್ ಅಧಿಕಾರಿ, ಶ್ರೀ ವೆಂಕಟರಮಣ ಹಾಗೂ ಹನುಮಂತ ದೇವಸ್ಥಾನದ ಮೊಕ್ತೇಸರ ಟಿ.ರಘುವೀರ ಶೆಣೈ ಸಲಹೆ ನೀಡಿದರು. ವಿಶ್ರಾಂತ  ಶಿಕ್ಷಕ ಅಂಡಾರು ಗುಣಪಾಲ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. 

ನಗರ ಸಮಿತಿ ರಚನೆ:

ಜೀರ್ಣೋದ್ಧಾರದ ಮೂಡುಬಿದಿರೆ ನಗರ ಸಮಿತಿಯನ್ನು ಸಭೆಯಲ್ಲಿ ರಚಿಸಲಾಯಿತು. ಕೆ.ಅಮರನಾಥ ಶೆಟ್ಟಿ ಅವರನ್ನು ಅಧ್ಯಕ್ಷರನ್ನಾಗಿ ಹಾಗೂ ಚಂದ್ರಶೇಖರ್ ಎಂ. ಅವರನ್ನು ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News