×
Ad

ಈ 28 ವರ್ಷದ ಇಂಜಿನಿಯರ್ ಗೆ ಕಾಂಗ್ರೆಸ್ ಅಧ್ಯಕ್ಷ ಆಗಬೇಕಂತೆ!

Update: 2019-07-22 16:30 IST

ಪುಣೆ, ಜು.22: ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷತೆಗೆ ರಾಜೀನಾಮೆ ನೀಡಿದ ನಂತರ ಪಕ್ಷ ತನ್ನ ಹೊಸ ಅಧ್ಯಕ್ಷನ ಆಯ್ಕೆಯನ್ನು ಇನ್ನಷ್ಟೇ ಮಾಡಬೇಕಿರುವಂತಹ ಸಂದರ್ಭದಲ್ಲಿ ಪುಣೆಯ 28 ವರ್ಷದ ಇಲೆಕ್ಟ್ರಾನಿಕ್ಸ್ ಇಂಜಿನಿಯರ್ ಗಜಾನಂದ್ ಹೊಸಾಳೆ ತಾವು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಮೂಲದ ಉತ್ಪಾದನಾ ಸಂಸ್ಥೆಯ ಪುಣೆ ಘಟಕದಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುವ ಗಜಾನಂದ್ ತಮ್ಮ ಅರ್ಜಿಯನ್ನು ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ರಮೇಶ್ ಬಗ್ವೆ ಅವರಿಗೆ ಜುಲೈ 23ರಂದು ಸಲ್ಲಿಸಲು ಯೋಚಿಸುತ್ತಿದ್ದಾರೆ.

“ರಾಹುಲ್ ಗಾಂಧಿ ಈ ಹುದ್ದೆಯಲ್ಲಿ ಮುಂದುವರಿಯುವ ಇಚ್ಛೆಯಿಲ್ಲವೆಂದು ದೃಢವಾಗಿ ಹೇಳಿರುವುದರಿಂದ ಯಾರನ್ನು ಹೊಸ ಅಧ್ಯಕ್ಷರನ್ನಾಗಿಸುವುದು ಎಂಬ ಬಗ್ಗೆ ಪಕ್ಷದಲ್ಲಿ ಗೊಂದಲವಿದೆ. ಇಂತಹ ಸನ್ನಿವೇಶದಲ್ಲಿ ನಾನು ನನ್ನ ನಾಮಪತ್ರ ಸಲ್ಲಿಸಲು ಇಚ್ಛಿಸುತ್ತೇನೆ” ಎಂದು ಗಜಾನಂದ್ ಹೇಳಿದ್ದಾರೆ.

“ದೇಶದ ಹಿತದೃಷ್ಟಿಯಿಂದ ಕಾಂಗ್ರೆಸ್ ಪಕ್ಷದ ಪುನರುಜ್ಜೀವನ ಅಗತ್ಯವಾಗಿದೆ ಹಾಗೂ ಈ ನಿಟ್ಟಿನಲ್ಲಿ ಯುವ ನಾಯಕತ್ವ ಅಗತ್ಯವಿದೆ. ರಾಹುಲ್ ಗಾಂಧಿ ಕೂಡ ಇದನ್ನೇ ಹೇಳಿರುವುದರಿಂದ ವಯಸ್ಸಿನಲ್ಲಿ ಮಾತ್ರವಲ್ಲದೆ ಯೋಚನಾಲಹರಿಯಲ್ಲಿ ಹಾಗೂ ಹೃದಯದಲ್ಲೂ ಕಿರಿಯರು ಈ ಹುದ್ದೆ ತುಂಬುವ ಅಗತ್ಯವಿದೆ'' ಎಂದು ಗಜಾನಂದ್ ಅಭಿಪ್ರಾಯ ಪಟ್ಟಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಈಗ ಅಧ್ಯಕ್ಷರಿಲ್ಲದೇ ಇರುವುರಿಂದ ಹಲವರು ಪಕ್ಷದಿಂದ ದೂರ ಸರಿಯುತ್ತಿದ್ದಾರೆ ಎಂದೂ ಅವರು ಆತಂಕ ವ್ಯಕ್ತಪಡಿಸಿದರು. ತಾವು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯರೂ ಅಲ್ಲ ಹಾಗೂ ಇಲ್ಲಿಯ ತನಕ ಯಾವುದೇ ಪಕ್ಷದ ಜತೆ ನಂಟು ಹೊಂದಿಲ್ಲ ಆದರೆ ಪಕ್ಷದ ಅಧ್ಯಕ್ಷತೆಗೆ ಅರ್ಜಿ ಸಲ್ಲಿಸುವ ಮುನ್ನ ಪ್ರಾಥಮಿಕ ಸದಸ್ಯತನ ಪಡೆಯುತ್ತೇನೆ ಎಂದು ಗಜಾನಂದ್ ಹೇಳಿದ್ದಾರೆ.

ಪಕ್ಷವನ್ನು ಈಗಿನ ಬಿಕ್ಕಟ್ಟಿನಿಂದ ಹೊರತರಲು ತಮ್ಮ ಬಳಿ ಯೋಜನೆ ಸಿದ್ಧವಿದೆ ಎಂದೂ ಅವರು ಹೇಳಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News