ದ.ಕ. ಜಿಲ್ಲೆಯಲ್ಲಿ ಮೂರು ಮಂದಿ ಡೆಂಗ್ ನಿಂದ ಸಾವನ್ನಪ್ಪಿರುವುದು ದೃಢಪಟ್ಟಿದೆ: ಡಾ. ರಾಮಕೃಷ್ಣ ರಾವ್

Update: 2019-07-22 13:19 GMT

ಮಂಗಳೂರು, ಜು. 22: ದ.ಕ. ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳ ಹಾವಳಿ ತೀವ್ರಗೊಂಡಿರುವಂತೆಯೇ ಮೂರು ಮಂದಿ ಡೆಂಗ್ ಜ್ವರದಿಂದ ಸಾವನ್ನಪ್ಪಿರುವುದು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಮಕೃಷ್ಣ ರಾವ್ ತಿಳಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಡಬದಲ್ಲಿ ಮೂರು ವಾರಗಳ ಹಿಂದೆ ವೀಣಾ ನಾಯಕ್, ಜಪ್ಪು ಮಾರುಕಟ್ಟೆ ಬಳಿಯ ಗುಜ್ಜರಕೆರೆಯ ವಿದ್ಯಾರ್ಥಿನಿ ಶ್ರದ್ಧಾ ಕೆ. ಶೆಟ್ಟಿ ಹಾಗೂ ನಿನ್ನೆ ತಡರಾತ್ರಿ ಮೃತಪಟ್ಟ ಪತ್ರಕರ್ತ ನಾಗೇಶ್ ಸಾವು ಡೆಂಗ್‌ನಿಂದಾಗಿದೆ. ಕೊಡಿಯಾಲ್‌ಬೈಲ್‌ನ ಬಾಲಕ ಕೃಷ್‌ನ ಸಾವು ಡೆಂಗ್‌ನಿಂದ ಎಂಬುದಾಗಿ ದೃಪಟ್ಟಿಲ್ಲ ಎಂದು ಅವರು ಹೇಳಿದರು.

ಜ್ವರ ಬಾಧಿತರೆಲ್ಲರೂ ಡೆಂಗ್ ತಪಾಸಣೆ ಮಾಡುವ ಅಗತ್ಯವಿಲ್ಲ

ಜ್ವರ ಬಾಧಿತರೆಲ್ಲರೂ ಡೆಂಗ್ ರೋಗವಿರುವ ಬಗ್ಗೆ ತಪಾಸಣೆ ಮಾಡುವ ಅಗತ್ಯವಿರುವುದಿಲ್ಲ. ಜ್ವರ ಬಂದ ಬಳಿಕ ಅದರಲ್ಲೂ ವಿಶೇಷವಾಗಿ ತಲೆ ನೋವು, ಮೈಮೇಲೆ ರಕ್ತದ ತಡಿಕೆ, ಕೀಲು ನೋವು ಮೊದಲಾದ ತೀವ್ರತೆರನಾದ ಸಮಸ್ಯೆಗಳು ಇಲ್ಲವೆಂದಾಗ ಡೆಂಗ್ ರೋಗಕ್ಕೆ ಮಾಡಲಾಗುವ ಎನ್‌ಎಸ್1 ಪರೀಕ್ಷೆ ಮಾಡಬೇಕಾಗಿಲ್ಲ ಎಂದು ನಗರದ ಖ್ಯಾತ ವೈದ್ಯ ಹಾಗೂ ಮಲೇರಿಯಾ ಹಾಗೂ ಡೆಂಗ್ ರೋಗ ತಜ್ಞರಾದ ಡಾ. ಶ್ರೀನಿವಾಸ ಕಕ್ಕಿಲಾಯ ಮಾಹಿತಿ ನೀಡಿದರು.

ಜ್ವರ ಬಂದಾಗ ರೋಗಿಯ ಮಲೇರಿಯಾ ತಪಾಸಣೆ ಅಗತ್ಯ. ಅದಕ್ಕೆ ನಿರ್ದಿಷ್ಟವಾದ ಚಿಕಿತ್ಸೆಯನ್ನು ಒದಗಿಸಬೇಕಾಗುತ್ತದೆ. ಆದರೆ ಡೆಂಗ್ ಜ್ವರ ಬಂದ ಮೂರು ನಾಲ್ಕು ದಿನಗಳ ಜ್ವರ ನಿಲ್ಲದಾಗ ಪ್ಲೇಟ್‌ಲೆಟ್ ಪರೀಕ್ಷೆ ಮಾಡಬೇಕಾಗುತ್ತದೆ. ಮೈಮೇಲೆ ನವಿರಾದ ಕೆಂಪು ಬಣ್ಣದ ತಡಿಕೆ ಸಾಮಾನ್ಯವಾಗಿರುತ್ತದೆ. ಇದು ಡೆಂಗ್ ಜ್ವರದ ಪ್ರಮುಖ ಲಕ್ಷಣ. ಈ ಸಂದರ್ಭ ಬಿಳಿ ರಕ್ತ ಕಣ ಹಾಗೂ ಮಲೇರಿಯಾ ಪರೀಕ್ಷೆ ಮಾಡಿಸಬೇಕಾ ಗುತ್ತದೆ. ನೆಗೆಟಿವ್ ಆಗಿದ್ದರೆ ಟಿಸಿಡಿಸಿ ಪರೀಕ್ಷೆ ಮಾಡುವುದು ಬೇಕಾಗಿಲ್ಲ. ಡೆಂಗ್ ಜ್ವರವಿಲ್ಲದಲ್ಲಿ ಮೂರು ದಿನಗಳ ನಂತರ ಸಮಸ್ಯೆ ಆರಂಭವಾಗುತ್ತದೆ. ರಕ್ತನಾಳಗಳಿಂದ ರಕ್ತದ್ರವ ಹೊರ ಹೋಗಲು ಆರಂಭವಾಗುತ್ತದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ರಕ್ತದ್ರವದ ಸೋರಿಕೆ ಎನ್ನಲಾಗುತ್ತದೆ. ಈ ಸಂದರ್ಭ ಕೆಂಪು ರಕ್ತ ಕಣಗಳ ಪ್ರಮಾಣ ಏರಿಕೆಯಾಗುತ್ತದೆ. ಆಗ ಕೆಂಪು ರಕ್ತಕಣಗಳ ಪರೀಕ್ಷೆ ಮಾಡಬೇಕು.ಶೇ. 20ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಆಗಿದ್ದಲ್ಲಿ (ಹಿಂದೆ ತಪಾಸಣೆ ಮಾಡಿಸಿದಾಗ), ಅಥವಾ ವಯಸ್ಸಿಗೆ ಅನುಗುಣವಾಗಿ ಇಂತಿಷ್ಟು ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕೆಂಪು ರಕ್ತಕಣಗಳು ಹೆಚ್ಚಿದ್ದರೆ ಅದನ್ನು ಗಂಭೀರವಾದ ರಕ್ತ ದ್ರವದ ಸೋರಿಕೆ ಎಂಬ ಸೂಚನೆಯನ್ನು ನೀಡುತ್ತದೆ. ಈ ರೀತಿ ಸಮಸ್ಯೆ ಆದಾಗ ರೋಗಿಯನ್ನು ದಾಖಲಿಸಿಕೊಂಡು ಮೇಲ್ವಿಚಾರಣೆ ಮಾಡಬೇಕಾಗುತ್ತದೆ. ಸಹಜವಾಗಿ ಡೆಂಗ್ ಜ್ವರ ಬಂದಾಗ ಈ ರಕ್ತ ದ್ರವದ ಸೋರಿಗೆ ನಾಲ್ಕೈದು ದಿನಗಳಲ್ಲಿ ಕಡಿಮೆಯಾಗುತ್ತದೆ. ಡೆಂಗ್‌ಗೆ ಯಾವುದೇ ರೀತಿಯ ಮದ್ದು ಇರುವುದಿಲ್ಲ. ಇದು ಸೌಮ್ಯ ರೀತಿಯ ಸೋಂಕು ಆಗಿರುವ ಕಾರಣ, ಸಹಜವಾಗಿಯೇ ಗುಣವಾಗುತ್ತದೆ ಎಂದು ಡಾ. ಕಕ್ಕಿಲಾಯ ಸ್ಪಷ್ಟಪಡಿಸಿದರು.

ದೇಹದಲ್ಲಿ ರಕ್ತದ್ರವದ ಸೋರಿಕೆ ಆದಾಗ ದ್ರವ ಪೂರಣ (ಸಲೈನ್) ಚಿಕಿತ್ಸೆಯನ್ನು ಒದಗಿಸಲಾಗುತ್ತದೆ. ಇದನ್ನು ಅತೀ ಜಾಗರೂಕತೆಯಿಂದ ನೀಡಬೇಕು. ರೋಗಿಯ ಹಿಮೋಗ್ಲೋಬಿನ್‌ನಲ್ಲಿ ಯಾವುದೇ ಗಂಭೀರ ಬದಲಾವಣೆ ಇಲ್ಲದಿದ್ದಲ್ಲಿ ಭಯ ಪಡುವ ಅಗತ್ಯವಿಲ್ಲ. ಡೆಂಗ್ ಜ್ವರಕ್ಕೆ ಒಳಗಾದ 1 ಲಕ್ಷ ಮಂದಿಯಲ್ಲಿ 26 ಮಂದಿಗೆ ಮಾತ್ರ ಇದು ಮಾರಣಾಂತಿಕವಾಗಿರುತ್ತದೆ. ಡೆಂಗ್ ಬಾಧಿಸಿ ಗುಣಮುಖರಾದ ಶೇ. 0.5-ಶೇ1ರಷ್ಟು ಮಂದಿಯಲ್ಲಿ ಆನಂತರವೂ ಇತರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆರೋಗ್ಯವಂತ ಮನುಷ್ಯನಿಗೆ ಡೆಂಗ್ ಜ್ವರದಿಂದ ಯಾವುದೇ ಹಾನಿ ಇಲ್ಲ. ಮೂತ್ರಕೋಶ, ಮೂತ್ರಪಿಂಡ, ಕಿಡ್ನಿ ಸಮಸ್ಯೆ, ಮಧುಮೇಹ, ಜಾಂಡಿಸ್‌ನಂತಹ ಕಾಯಿಲೆಗಳಿಂದ ಬಳಲುತ್ತಿರುವವರು ಮತ್ತು ಗರ್ಭಿಣಿಯರು ಜ್ವರದ ಬಗ್ಗೆ ಜಾಗೃತೆ ವಹಿಬೇಕು ಎಂದು ಅವರು ಹೇಳಿದರು.

ನೀರು ನಿಲ್ಲದಂತೆ ಎಚ್ಚರಿಕೆ ವಹಿಸಿ ಸೊಳ್ಳೆ ಉತ್ಪತ್ತಿ ತಡೆಯುವುದು ಅಗತ್ಯ

ಜನ ಸಾಮಾನ್ಯರು ಪ್ರತಿಯೊಬ್ಬರೂ ದಿನವೊಂದನ್ನು ನಿಗದಿಪಡಿಸಿ ಕನಿಷ್ಠ ತಮ್ಮ ಮನೆಯ ಸುತ್ತಮುತ್ತಲೂ ನೀರು ಸಂಗ್ರಹವಾಗದಿರುವುದನ್ನು ಖಾತರಿಪಡಿಸಿಕೊಂಡಲ್ಲಿ ಕೇವಲ 15 ದಿನಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ನಿಯಂತ್ರಿಸಲು ಸಾಧ್ಯ. ಈಗಾಗಲೇ ಹುಟ್ಟಿರುವ ಸೊಳ್ಳೆಯಿಂದ ಕಚ್ಚಿಸಿಕೊಳ್ಳದಂತೆ ಎಚ್ಚರಿಕೆ ವಹಿಸಬೇಕು. ಈ ಸೊಳ್ಳೆ ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುವುದು ಜಾಸ್ತಿ. ಸೊಳ್ಳೆಗಳು ನಮ್ಮ ದೇಹದ ವಾಸನೆಯನ್ನು ಆಕರ್ಷಿಸದಂತೆ ಅದಕ್ಕೆ ವಿರುದ್ಧವಾದ ನಿಂಬೆ ಹಣ್ಣಿನ ರಸ, ಬೇವಿನ ಎಣ್ಣೆ ಮೊದಲಾದ ಪೂರಕ ವಾಸನೆಯುತ್ತ ಪದಾರ್ಥಗಳನ್ನು ಮೈಮೇಲೆ ಅಥವಾ ಧರಿಸಿರುವ ಬಟ್ಟೆ ಮೇಲಿ ಸಿಂಪಡಿಸಿಕೊಂಡರೆ ಸೊಳ್ಳೆಗಳು ಕಚ್ಚದಂತೆ ಎಚ್ಚರಿಕೆ ವಹಿಸಬಹುದು.

ಫಾಗಿಂಗ್ ಪರಿಹಾರ ಅಲ್ಲ

ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್ ಪರಿಹಾರ ಅಲ್ಲ. ಅದು ದುಬಾರಿ ಕೂಡಾ. ನನ್ನ ಮನೆಯಲ್ಲಿ ತೆರೆದ ಜಾಗದಲ್ಲಿ ನೀರು ಸಂಗ್ರಹವಾಗದಂತೆ, ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗದಂತೆ ಎಚ್ಚರಿಕೆ ವಹಿಸುವುದೇ ನಿಯಂತ್ರಣ. ಯಾವುದೇ ರೀತಿಯ ಆಹಾರ, ಮನೆ ಮದ್ದು ಸೇವಿಸುವುದರಿಂದ ಡೆಂಗ್ ಜ್ವರ ಕಡಿಮೆಯಾಗುತ್ತದೆ. ದೇಹದಲ್ಲಿ ಪ್ಲೇಟ್‌ಲೆಟ್ ಹೆಚ್ಚಾಗುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಆಧಾರ ಇಲ್ಲ. ಹಾಗಾಗಿ ಜನಸಾಮಾನ್ಯರು ಗಾಬರಿ, ಗೊಂದಲಕ್ಕೊಳಗಾಗದೆ ಸೊಳ್ಳೆಗಳ ಸ್ವ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು

- ಡಾ. ಶ್ರೀನಿವಾಸ ಕಕ್ಕಿಲಾಯ, ಖ್ಯಾತ ವೈದ್ಯರು, ಮಂಗಳೂರು.

‘ನಿಮ್ಮ ಮನೆ ನಿಮ್ಮ ಜವಾಬ್ಧಾರಿ’

ಮನಪಾ ವತಿಯಿಂದ ಈಗಾಗಲೇ ನಗರದ ಶಾಲೆಗಳಲ್ಲಿ ಮಕ್ಕಳಿಗೆ ಜಾಗೃತಿ ಮೂಡಿಸುವ ಕೆಲಸ ಆರಂಭಿಸಲಾಗಿದೆ. ಮಕ್ಕಳಿಗೆ ‘ನಿಮ್ಮ ಮನೆ ನಿಮ್ಮ ಜವಾಬ್ಧಾರಿ’ ಎಂಬ ಘೋಷಣೆಯೊಂದಿಗೆ ಪ್ರತಿ ದಿನ ತಮ್ಮ ಮನೆ ಹಾಗೂ ಸುತ್ತಮುತ್ತಲಲ್ಲಿ ನೀರು ನಿಲ್ಲದಂತೆ ಗಮನ ಹರಿಸಿ ಮನೆಯವರಿಗೂ ತಿಳಿ ಹೇಳಿ ನಿಂತ ನೀರನ್ನು ಬರಿದು ಮಾಡಲು ಜಾಗೃತಿ ಮೂಡಿಸಲಾಗುತ್ತಿದೆ.

- ಗಾಯತ್ರಿ ನಾಯಕ್, ಹಿರಿಯ ಅಧಿಕಾರಿ, ಮನಪಾ.

ಮನಪಾದಿಂದ 85,000 ರೂ. ದಂಡ ಸಂಗ್ರಹ

ನಿರ್ಮಾಣ ಹಂತದ ಕಟ್ಟಡಗಳಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ತಾಣವಾಗಿದ್ದರೆ ಅಂತಹ ಕಟ್ಟಡಗಳ ಗುತ್ತಿಗೆದಾರರು, ಮಾಲಕರಿಗೆ ದಂಡ ವಿಧಿಸಲು ಆರಂಭಿಸಲಾಗಿದ್ದು, ರವಿವಾರ ಎಂಟು ಕಟ್ಟಡಗಳಿಗೆ ದಂಡ ವಿಧಿಸಿ 85,000 ರೂ. ದಂಡ ವಸೂಲು ಮಾಡಲಾಗಿದೆ. ಇಂದು ಕೂಡಾ ಸುಮಾರು 6 ಕಟ್ಟಡಗಳಿಗೆ ದಂಡ ವಿಧಿಸಲಾಗಿದೆ. ಮನಪಾದಿಂದ 85 ತಂಡಗಳ ಮೂಲಕ ಸೊಳ್ಳೆ ಉತ್ಪತ್ತಿ ಕೇಂದ್ರವಾಗಿ ಗುರುತಿಸಲಾಗಿರುವ ಪ್ರದೇಶಗಳಲ್ಲಿ ಫಾಗಿಂಗ್ ಸೇರಿದಂತೆ ಸಂಗ್ರಹಿಸಿದ ನೀರು ಖಾಲಿ ಮಾಡಿಸುವ ಕಾರ್ಯಾಚರಣೆ ನಡೆಸಲಾಗುತ್ತಿದೆ. ಎನ್‌ಜಿಒಗಳು ಕೂಡಾ ಈ ಕಾರ್ಯದಲ್ಲಿ ಸಹಕಾರ ನೀಡುತ್ತಿದ್ದಾರೆ. ಈಗಾಗಲೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಗರದ ಕೊಡಿಯಾಲ್‌ಬೈಲ್, ಗುಜ್ಜರಕೆರೆ, ಮಹಾಕಾಳಿಪ್ಪು,ಜಪ್ಪು, ಮುಳಿಹಿತ್ಲು, ಮಂಗಳಾದೇವಿ, ಕದ್ರಿ ಪ್ರದೇಶಗಳನ್ನು ಹೈ ರಿಸ್ಕ್ ಪ್ರದೇಶಗಳಾಗಿ ಗುರುತಿಸಿ ಫಾಗಿಂಗ್ ನಡೆಸಲಾಗುತ್ತಿದೆ. ಒಂದು ದಿನವನ್ನು ನಿಗದಿ ಮಾಡಿ ಆ ದಿನದಂದು ಜನ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಮಾಡುವ ಆ್ಯಕ್ಷನ್ ಡೇ ಎಂಬುದಾಗಿ ಮಾಡುವ ಉದ್ದೇಶವಿದೆ.

- ಮುಹಮ್ಮದ್ ನಝೀರ್, ಆಯುಕ್ತರು, ಮನಪಾ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News