ಕಾಂಗ್ರೆಸ್‌ಗೆ ಗಾಂಧಿಯೇತರ ವರಿಷ್ಠರ ನೇಮಿಸಿದರೆ 24 ಗಂಟೆಗಳಲ್ಲಿ ಪಕ್ಷ ವಿಭಜನೆ: ನಟವರ ಸಿಂಗ್

Update: 2019-07-22 14:38 GMT

ಹೊಸದಿಲ್ಲಿ, ಜು. 22: ಕಾಂಗ್ರೆಸ್‌ಗೆ ಗಾಂಧಿಯೇತರ ವರಿಷ್ಠರನ್ನು ನೇಮಿಸಿದರೆ ಪಕ್ಷ 24 ಗಂಟೆಗಳ ಒಳಗಡೆ ಪಕ್ಷ ವಿಭಜನೆಯಾಗಬಹುದು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ನಟವರ ಸಿಂಗ್ ಸೋಮವಾರ ಹೇಳಿದ್ದಾರೆ.

ಸೋನ್‌ಭದ್ರಕ್ಕೆ ಭೇಟಿ ನೀಡಿರುವುದಕ್ಕೆ ಪ್ರಿಯಾಂಕಾ ಅವರನ್ನು ಪ್ರಶಂಸಿಸಿರುವ ನಟವರ ಸಿಂಗ್, ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ವರಿಷ್ಠರ ಹುದ್ದೆಗೆ ಸಮರ್ಥ ಎಂದಿದ್ದಾರೆ. ‘‘ಅವರು ಉತ್ತರಪ್ರದೇಶದ ಹಳ್ಳಿಯಲ್ಲಿ ಏನು ಮಾಡಿದ್ದಾರೆ ಎಂದು ನಮಗೆಲ್ಲಾ ಗೊತ್ತಿದೆ. ಅದು ಅದ್ಭುತ. ಅವರು ಅಲ್ಲಿ ತಂಗಿದರು. ಅವರು ಬಯಸಿದ್ದನ್ನು ಮಾಡಿದರು’’ ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್‌ನ ವರಿಷ್ಠ ಸ್ಥಾನಕ್ಕೆ ಗಾಂಧಿ ಕುಟುಂಬದಿಂದ ಹೊರಗಿನವರನ್ನು ಆಯ್ಕೆ ಮಾಡಬೇಕು ಎಂದು ರಾಹುಲ್ ಅವರು ನೀಡಿದ ಸಲಹೆಗಿಂತ ಭಿನ್ನವಾದ ಅಭಿಪ್ರಾಯವನ್ನು ನಟವರ ಸಿಂಗ್ ವ್ಯಕ್ತಪಡಿಸಿದ್ದಾರೆ.

ಪ್ರಿಯಾಂಕ ಅವರು ಪಕ್ಷದ ಅಧ್ಯಕ್ಷರನ್ನಾಗಿ ಆಯ್ಕೆಯಾಗುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಪ್ರಿಯಾಂಕಾ ಅವರಿಗೆ ಸಂಬಂಧಿಸಿದ್ದು. ಕಾಂಗ್ರೆಸ್ ಅಧ್ಯಕ್ಷರಾಗಿ ಗಾಂಧಿ ಕುಟುಂಬದವರು ಆಗಬಾರದು ಎಂದು ಈ ಹಿಂದೆ ಅವರ ಸಹೋದರ (ರಾಹುಲ್ ಗಾಂಧಿ) ಹೇಳಿದ್ದರು ಎಂದು ನಟವರ ಸಿಂಗ್ ತಿಳಿಸಿದ್ದಾರೆ. ಈ ಹಿಂದೆ ಮಾಜಿ ಪ್ರಧಾನಿ ದಿವಂಗತ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುತ್ರ ಅನಿಲ್ ಶಾಸ್ತ್ರಿ, ಪ್ರಿಯಾಂಕಾ ಗಾಂಧಿ ಅವರನ್ನು ಕಾಂಗ್ರೆಸ್‌ನ ವರಿಷ್ಠರಾಗಿ ನೇಮಕ ಮಾಡಬೇಕು. ಅವರಿಗಿಂತ ಬೇರೆ ಯಾರೂ ಶೇ. 100 ಸ್ವೀಕಾರಾರ್ಹವಾಗಲಾರರು ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News