ಫಸಲು ನಷ್ಟವಾದ ರೈತರಿಗೆ ಪರಿಹಾರ ನೀಡಲು ಭಾಕಿಸಂ ಆಗ್ರಹ

Update: 2019-07-22 14:51 GMT

ಕುಂದಾಪುರ, ಜು.22: ಈ ವರ್ಷ ಬೇಸಿಗೆಯಲ್ಲಿ ಕುಂದಾಪುರ ತಾಲೂಕಿನ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಉಂಟಾದ ಬರದಿಂದಾಗಿ ಅನೇಕ ತೋಟಗಳೂ ನೀರಿಲ್ಲದೇ ಮರಗಳೆಲ್ಲಾ ಒಣಗಿ, ಬಹುಪಾಲು ತೋಟಗಳ ಮರಗಳು ಸತ್ತಿವೆ. ಇದರಿಂದ ಫಸಲಿಗಾದ ನಷ್ಟಕ್ಕೆ ರೈತರಿಗೆ ಪರಿಹಾರ ನೀಡುವಂತೆ ಭಾರತೀಯ ಕಿಸಾನ್ ಸಂಘ ಸರಕಾರವನ್ನು ಆಗ್ರಹಿಸಿದೆ.

ಸೀತಾರಾಮ ಗಾಣಿಗರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಭಾರತೀಯ ಕಿಸಾನ್ ಸಂಘದ ಕುಂದಾಪುರ ತಾಲೂಕು ಸಮಿತಿ ಮಾಸಿಕ ಸಭೆಯಲ್ಲಿ ರೈತರ ಈ ಸಮಸ್ಯೆಯ ಬಗ್ಗೆ ಚರ್ಚಿಸಿ, ಪರಿಹಾರಕ್ಕಾಗಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿ, ಅದರ ಪ್ರತಿಗಳನ್ನು ತಾಲೂಕಿನ ಕೃಷಿ ಹಾಗೂ ತೋಟಗಾರಿಕಾ ಇಲಾಖೆಗೂ ಳುಹಿಸಿಕೊಡಲು ತೀರ್ಮಾನಿಸಲಾಯಿತು.

ಅಲ್ಲದೇ ಜಿಲ್ಲಾ ಸಮಿತಿಯ ಮೂಲಕ ಜಿಲ್ಲಾಧಿಕಾರಿಯವರನ್ನು, ಉಸ್ತುವಾರಿ ಸಚಿವರನ್ನು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಸಭೆ ನಿರ್ಣಯಿಸಿತು.

ಈ ಬಾರಿ ನೀರಿಗುಂಟಾದ ಸಮಸ್ಯೆಯಿಂದಾಗಿ ರೈತರ ತೋಟಗಳು ಒಣಗಿ, ಬಹುಪಾಲು ತೋಟಗಳಲ್ಲಿದ್ದ ಮರಗಳು ಸತ್ತಿವೆ. ಇದರಿಂದ ಮುಂದಿನ ವರ್ಷಕ್ಕೆ ಬೆಳೆಯೇ ಇಲ್ಲದ ಪರಿಸ್ಥಿತಿ ಒಂದೆಡೆಯಾದರೆ, ಹಾಳಾದ ತೋಟ ಮೊದಲಿ ನಂತಾಗಲು ಇನ್ನೂ ಕೆಲವು ವರ್ಷಗಳೇ ಬೇಕು ಎಂಬ ಅಳಲನ್ನು ತಾಲೂಕಿನ ಬಹಳಷ್ಟು ರೆತರು ಸಭೆಯಲ್ಲಿ ತೋಡಿಕೊಂಡರು.

ಇದೇ ಸಂದರ್ದಲ್ಲಿ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ಅಧಿಕಾರಿ ಮಧುಕರ್ ಅವರು ಇಲಾಖೆಯಿಂದ ರೈತರಿಗೆ ಲ್ಯವಿರುವ ಯೋಜನೆಗಳ ಸಮಗ್ರ ಮಾಹಿತಿಯನ್ನು ನೀಡಿದರು. ಹಾಗೂ ಆ ಯೋಜನೆ ಗಳಡಿಯಲ್ಲಿ ಸಿಗಬಹುದಾದ ಸಹಾಯ ಧನ ಮತ್ತು ಅವುಗಳನ್ನು ಪಡೆಯುವ ವಿಧಾನಗಳನ್ನು ತಿಳಿಸಿಕೊಟ್ಟರು.

ಕಳೆದ ವರ್ಷ ಅಡಿಕೆ ಕೊಳೆ ರೋಗದಿಂದಾದ ನಷ್ಟಕ್ಕೆ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ ರೈತರಿಗೆ ಪರಿಹಾರ ಮಂಜೂರಾಗಿದ್ದರೂ, ಕುಂದಾಪುರ ತಾಲೂಕಿನ 672 ರೈತರ ಖಾತೆಗೆ ಪರಿಹಾರದ ಹಣ ಜಮೆಯಾಗಿಲ್ಲ. ಅದಕ್ಕೆ ಅಧಿಕಾರಿಗಳು ರೈತರ ಖಾತೆಗೆ ಆಧಾರ ಸಂಖ್ಯೆ ಜೋಡಣೆ ಯಾಗಿಲ್ಲ ಎಂಬ ಉತ್ತರ ನೀಡುತ್ತಿದ್ದಾರೆ. ಅರ್ಜಿ ಸಲ್ಲಿಸಿ, ಇನ್ನೂ ಪರಿಹಾರ ತಮ್ಮ ಖಾತೆಗೆ ಬಂದಿಲ್ಲ ಎನ್ನುವ ರೈತರು, ಕುಂದಾಪುರದ ಭಾರತೀಯ ಕಿಸಾನ್ ಸಂಘದ ಕಚೇರಿ ಅಥವಾ ತೋಟಗಾರಿಕಾ ಇಲಾಖೆಯ ಕಚೇರಿಗೆ ಬೇಟಿಕೊಟ್ಟು, ತಮ್ಮ ಅರ್ಜಿ ಏನಾಗಿದೆ ಎಂಬುದನ್ನು ಪರಿಶೀಲಿಸಿ, ದಾಖಲೆಗಳನ್ನು ಸರಿಪಡಿಸಿ, ತಮ್ಮ ಖಾತೆಗೆ ಪರಿಹಾರದ ಹಣ ಬರುವಂತೆ ಮಾಡಬಹುದಾಗಿದೆ ಎಂದು ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದಶಿರ್ ಸತ್ಯನಾರಾಯಣ ಉಡುಪ ತಿಳಿಸಿದರು.

ಸಂಘದ ರಾಜ್ಯ ಸಮಿತಿ ಸದಸ್ಯ ಬಿ.ವಿ.ಪೂಜಾರಿ ಮಾತನಾಡಿ ಅರಣ್ಯ ಇಲಾಖೆಯಿಂದ ಅಕೇಶಿಯಾ ಗಿಡ ನೆಡುವ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಲೇ ಇದೆ. ಹಣ್ಣುಹಂಪಲು ಗಿಡ ನೆಡುವ ಬಗ್ಗೆ ಎಷ್ಟೇ ಕೇಳಿಕೊಂಡರೂ ಪ್ರತೀ ವರ್ಷ ನೆಡುವ ಒಟ್ಟು ಗಿಡಗಳ ಪೈಕಿ ಶೇ.10ರಷ್ಟು ನೆಡುತ್ತಿಲ್ಲ. ದಟ್ಟ ಅರಣ್ಯದ ಒಳಗೆ ಮರವೇ ಇಲ್ಲ, ಅದರಲ್ಲೂ ಹಣ್ಣು ಹಂಪಲು ಬಿಡುವ ಮರ ಸಿಗುವುದೇ ಇಲ್ಲ. ನೀರಿನ ವ್ಯವಸ್ಥೆಯಿಲ್ಲ. ಹೀಗಾಗಿ ಕಾಡು ಪ್ರಾಣಿಗಳು ಊರಿಗೆ ಬರುತ್ತಿವೆ ಎಂದು ರೈತರ ಸಂಕಷ್ಟವನ್ನು ವಿವರಿಸಿದರು.

ಇದೀಗ ಮಂಗ, ಜಿಂಕೆ, ನವಿಲುಗಳ ಹಾವಳಿ ವಿಪರೀತವಾದರೆ ಅವುಗಳ ಹಿಂದೆ ಚಿರತೆ, ಹುಲಿಗಳೂ ಬರುತ್ತಿವೆ. ಸರಕಾರಗಳು ಕಾಡುಪ್ರಾಣಿಗಳ ರಕ್ಷಣೆಗೆ ತೋರುವ ಆಸಕ್ತಿಯನ್ನು ರೈತರ ಬೆಳೆಯ ರಕ್ಷಣೆಗೆ ತೋರುತ್ತಿಲ್ಲ. ಕಾಡುಪ್ರಾಣಿ ಗಳಿಂದ ನಮ್ಮ ಬೆಳೆ ರಕ್ಷಿಸಿಕೊಟ್ಟರೆ ನಮಗೆ ಯಾವುದೇ ಮನ್ನಾ ಅಥವಾ ಸಹಾಯಧನ ಬೇಕಿಲ್ಲ. ರೈತರ ದನಕರುಗಳು ಬೇರೆಯವರ ಕೃಷಿ ಹಾಳು ಮಾಡಿದರೆ ಹೇಗೆ ಅದರ ಮಾಲಿಕರನ್ನು ಹೊಣೆ ಮಾಡುತ್ತೇವೋ, ಹಾಗೆ ಕಾಡುಪ್ರಾಣಿಗಳು ಮಾಡುವ ನಷ್ಟಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳನ್ನೇ ಹೊಣೆ ಮಾಡಬೇಕು ಎಂದರು.

 ಕುಂದಾಪುರ ತಾಲೂಕು ತೆಂಗು ಫೆಡರೇಶನ್ ಅಧ್ಯಕ್ಷ ವೆಂಕಟೇಶ ರಾವ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿನಕರ ಶೆಟ್ಟಿ, ಸಂಘದ ಪ್ರಮುಖರಾದ ಗಣಪಯ್ಯ ಗಾಣಿಗ, ನಾರಾಯಣ ಶೆಟ್ಟಿ, ಜಯರಾಮ ಶೆಟ್ಟಿ, ಮಂಜುನಾಥ ಹೆಬ್ಬಾರ, ಸತ್ಯನಾರಾಯಣ ಅಡಿಗ, ಮಹಾಬಲ ಬಾಯರಿ, ಚನ್ನಕೇಶವ ಕಾರಂತ, ಸುಧಾಕರ ನಾಯಕ್, ಶಿವರಾಮ ಮಧ್ಯಸ್ಥ, ನಾಗೇಂದ್ರ ಉಡುಪ, ಶಿವರಾಜ ಶೆಟ್ಟಿ, ತೇಜಪ್ಪಶೆಟ್ಟಿ, ಚಂದ್ರಶೇಖರ, ಶೇಷು ಆಚಾರ್ಯ, ಶ್ರೀಕಂಠ ಯಡಿಯಾಳ, ನಾಗಯ್ಯ ಶೆಟ್ಟಿ, ಮಂಜಯ್ಯ ಶೆಟ್ಟಿ ಹಾಗೂ ತಾಲೂಕಿನ 40ಕ್ಕೂ ಹೆಚ್ಚು ಗ್ರಾಮ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.

ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರಾಣೇಶ ಯಡಿಯಾಳ್ ಸ್ವಾಗತಿಸಿ, ನಿರ್ಣಯಗಳನ್ನು ಮಂಡಿಸಿದರು. ಕೋಶಾಧಿಕಾರಿ ಅನಂತಪದ್ಮನಾ ಉಡುಪ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News