ಆರ್‌ಟಿಐ ತಿದ್ದುಪಡಿಯನ್ನು ತಿರಸ್ಕರಿಸುವಂತೆ ಸಂಸದರಿಗೆ ಮಾಜಿ ಸಿಐಸಿ ಶ್ರೀಧರ್ ಆಚಾರ್ಯುಲು ಮನವಿ

Update: 2019-07-23 08:50 GMT

ಹೊಸದಿಲ್ಲಿ, ಜು.22: “ಪ್ರಸ್ತಾವಿತ ಆರ್‌ಟಿಐ ತಿದ್ದುಪಡಿಯು, ಕೇಂದ್ರೀಯ ಮಾಹಿತಿ ಆಯೋಗದ ಬೆನ್ನಿಗೆ ಹಾಕಿದ ಚೂರಿ ಮತ್ತು ಕಾನೂನಿನ ಮರಣ ಶಾಸನ” ಎಂದು ದೂರಿರುವ ಮಾಜಿ ಕೇಂದ್ರೀಯ ಮಾಹಿತಿ ಆಯುಕ್ತ ಶ್ರೀಧರ್ ಆಚಾರ್ಯುಲು, ಈ ತಿದ್ದುಪಡಿಯನ್ನು ತಿರಸ್ಕರಿಸುವಂತೆ ಸಂಸತ್ ಸದಸ್ಯರಿಗೆ ಮನವಿ ಮಾಡಿದ್ದಾರೆ.

ಹಲವು ಪ್ರತಿಷ್ಠಿತ ಪ್ರಕರಣಗಳಲ್ಲಿ ಪಾರದರ್ಶಕತೆಯ ಪರ ಆದೇಶ ನೀಡಿರುವ ಹೆಗ್ಗಳಿಕೆಯನ್ನು ಹೊಂದಿರುವ ಆಚಾರ್ಯುಲು ಅವರು, ಪ್ರಸ್ತಾವಿತ ಬದಲಾವಣೆಗಳು ಮಾಹಿತಿ ಆಯೋಗದ ಸ್ವಾಯತ್ತೆಯನ್ನು ಗಂಭೀರವಾಗಿ ನಿರ್ಲಕ್ಷಿಸುತ್ತದೆ ಎಂದು ತಿಳಿಸಿದ್ದಾರೆ. ಈ ಲೋಪದಿಂದ ಕೂಡಿದ ಕ್ರಮ ಆಯುಕ್ತರ ಬೆನ್ನುಮೂಳೆಯಿಲ್ಲದಂತೆ ಮತ್ತು ಅಧಿಕಾರ ಇಲ್ಲದಂತೆ ಮಾಡುವ ಮೂಲಕ ಅವರು ಯಾವುದೇ ಆದೇಶವನ್ನು ಹೊರಡಿಸುವಂತೆ ಮಾಡುತ್ತದೆ ಮತ್ತು ಮಾಹಿತಿ ಹಕ್ಕು ಕಾಯ್ದೆಯ ಉದ್ದೇಶಗಳನ್ನು ಜಾರಿಗೆ ತರಲು ಅವರು ವಿಫಲವಾಗುವಂತಾಗುತ್ತದೆ ಎಂದು ಖ್ಯಾತ ಕಾನೂನು ಉಪನ್ಯಾಸಕರೂ ಆಗಿರುವ ಆಚಾರ್ಯುಲು ತಿಳಿಸಿದ್ದಾರೆ.

ಸಂಸದರು ಈ ಮಸೂದೆಯನ್ನು ಅಂಗೀಕರಿಸಿದರೆ ಮಾಹಿತಿ ಆಯುಕ್ತರು ರಾಜ್ಯ ಮತ್ತು ಕೇಂದ್ರ ಸರಕಾರಗಳ ಕೈಗೊಂಬೆಗಳಾಗಬೇಕಾಗುತ್ತದೆ. ಹಾಗಾಗಿ ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲ ಸಂಸದರು ಇದನ್ನು ವಿರೋಧಿಸಬೇಕು ಮತ್ತು ಈ ತಿದ್ದುಪಡಿ ತಿರಸ್ಕೃತವಾಗುವಂತೆ ನೋಡಿಕೊಳ್ಳಬೇಕು ಎಂದು ನಾನವರಲ್ಲಿ ಮನವಿ ಮಾಡುತ್ತೇನೆ ಎಂದು ಮಾಜಿ ಮಾಹಿತಿ ಆಯುಕ್ತರು ತಿಳಿಸಿದ್ದಾರೆ.

ಮಾಹಿತಿ ಆಯುಕ್ತ ಸೇವಾವಧಿ ಮತ್ತು ಅಧಿಕಾರ ಸ್ಥಿತಿಯನ್ನು ಬದಲಾಯಿಸಲು ಸರಕಾರ ಬಯಸಿದೆ. ಸದ್ಯ ಮಾಹಿತಿ ಆಯುಕ್ತರು ಚುನಾವಣಾ ಆಯುಕ್ತರಷ್ಟೇ ಅಧಿಕಾರ ಮತ್ತು ವರ್ಚಸ್ಸನ್ನು ಹೊಂದಿದ್ದಾರೆ. ಪ್ರಸ್ತಾವಿತ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸಿಬ್ಬಂದಿ ಸಹಾಯಕ ಸಚಿವ ಜಿತೇಂದ್ರ ಸಿಂಗ್ ಶುಕ್ರವಾರ, ಜುಲೈ 15ರಂದು ಲೋಕಸಭೆಯಲ್ಲಿ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News