ನಿರೀಕ್ಷಣಾ ಜಾಮೀನು ಮರುಪರಿಚಯ ಮಸೂದೆಗೆ ರಾಷ್ಟ್ರಪತಿಗಳ ಸಮ್ಮತಿ

Update: 2019-07-22 15:20 GMT

ಹೊಸದಿಲ್ಲಿ,ಜು.22: 1976ರಲ್ಲಿ ರದ್ದುಗೊಳಿಸಲ್ಪಟ್ಟ ನಿರೀಕ್ಷಣಾ ಜಾಮೀನು ನಿಬಂಧನೆಯನ್ನು ಮರುಪರಿಚಯಿಸುವ ಉದ್ದೇಶದಿಂದ ಉತ್ತರ ಪ್ರದೇಶ ಮಂಡಿಸಿರುವ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ ಸಮ್ಮತಿ ಸೂಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಪ್ರದೇಶ ಮತ್ತು ಉತ್ತರಾಖಂಡನ್ನು ಹೊರತುಪಡಿಸಿ ದೇಶದ ಉಳಿದೆಲ್ಲ ರಾಜ್ಯಗಳಲ್ಲಿ ನಿರೀಕ್ಷಣಾ ಜಾಮೀನಿನ ಸೌಲಭ್ಯವಿದೆ. ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್ (ಉತ್ತರ ಪ್ರದೇಶ ತಿದ್ದುಪಡಿ) ಮಸೂದೆ, 2018ಕ್ಕೆ ರಾಷ್ಟ್ರಪತಿಗಳು ಸಮ್ಮತಿ ಸೂಚಿಸಿದ್ದಾರೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದರೊಂದಿಗೆ ನಾಲ್ಕು ದಶಕಗಳ ನಂತರ ಉತ್ತರ ಪ್ರದೇಶದಲ್ಲಿ ನಿರೀಕ್ಷಣಾ ಜಾಮೀನು ಪಡೆಯುವ ಸೌಲಭ್ಯವನ್ನು ಮರುಸ್ಥಾಪಿಸಿದಂತಾಗಿದೆ.

ತಿದ್ದುಪಡಿಯ ಪ್ರಕಾರ, ನಿರೀಕ್ಷಣಾ ಜಾಮೀನಿನ ವಿಚಾರಣೆ ನಡೆಯುವ ಸಂದರ್ಭದಲ್ಲಿ ಆರೋಪಿ ನ್ಯಾಯಾಲಯದಲ್ಲಿ ಹಾಜರಿರುವ ಅಗತ್ಯವಿರುವುದಿಲ್ಲ. ನಿರೀಕ್ಷಣಾ ಜಾಮೀನು ನೀಡುವ ಸಂದರ್ಭದಲ್ಲಿ ನ್ಯಾಯಾಲಯ ಅರ್ಜಿದಾರರಿಗೆ ಅನೇಕ ಕಡ್ಡಾಯ ಷರತ್ತುಗಳನ್ನು ವಿಧಿಸುವ ಅಧಿಕಾರವನ್ನು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News