ಮಾಲೆಗಾಂವ್ ಸ್ಫೋಟ ಪ್ರಕರಣದ ವಿಚಾರಣೆ ಮುಕ್ತಾಯದ ದಿನಾಂಕ ತಿಳಿಸಲು ಎನ್‌ಐಎಗೆ ಸೂಚನೆ

Update: 2019-07-22 15:24 GMT

ಮುಂಬೈ, ಜು.22: 2008ರ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ ವಿಚಾರಣೆ ಯಾವಾಗ ಮುಗಿಯುತ್ತದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಬಾಂಬೆ ಹೈಕೋರ್ಟ್ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ತಿಳಿಸಿದೆ.

ನ್ಯಾಯಾಲಯದ ಕಲಾಪದ ವೀಡಿಯೊ ದಾಖಲೀಕರಣ ಮಾಡಬೇಕು ಹಾಗೂ ವಿಚಾರಣೆಯನ್ನು ಆರು ತಿಂಗಳೊಳಗೆ ಪೂರ್ಣಗೊಳಿಸುವಂತೆ ಕೆಳ ನ್ಯಾಯಾಲಯಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾಗಿರುವ ಸಮೀರ್ ಕುಲ್ಕರ್ಣಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭ ನ್ಯಾಯಪೀಠ ಈ ಸೂಚನೆ ನೀಡಿದೆ.

 ಪ್ರಕರಣದಲ್ಲಿ ಒಟ್ಟು 475 ಪ್ರಾಸಿಕ್ಯೂಷನ್ ಸಾಕ್ಷಿಗಳಿದ್ದು, ಇದರಲ್ಲಿ 124 ಸಾಕ್ಷಿಗಳ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ ಎಂದು ಎನ್‌ಐಎ ವಕೀಲ ಸಂದೇಶ್ ಪಾಟೀಲ್ ನ್ಯಾಯಪೀಠದ ಗಮನಕ್ಕೆ ತಂದರು. ವಿಚಾರಣೆ ಯಾವಾಗ ನಡೆಯುತ್ತದೆ ಮತ್ತು ಯಾವಾಗ ಮುಕ್ತಾಯಗೊಳ್ಳುತ್ತದೆ ಎಂಬ ಬಗ್ಗೆ 2 ವಾರದೊಳಗೆ ಪ್ರತಿಕ್ರಿಯಿಸುವಂತೆ ಎನ್‌ಐಎ ವಕೀಲರಿಗೆ ನ್ಯಾಯಾಧೀಶರಾದ ರಂಜಿತ್ ಮೋರೆ ಹಾಗೂ ಭಾರತಿ ಡಾಂಗ್ರೆ ಅವರಿದ್ದ ವಿಭಾಗೀಯ ನ್ಯಾಯಪೀಠ ಸೂಚಿಸಿದೆ.

ಈ ಮಧ್ಯೆ, ಪ್ರಕರಣಕ್ಕೆ ಸಂಬಂಧಿಸಿದ ಮತ್ತೊಂದು ವಿಷಯವನ್ನು ಉಲ್ಲೇಖಿಸಿದ ಎನ್‌ಐಎ, ಈ ಹಿಂದೆ ಹೇಳಿಕೆಗಳನ್ನು ಮೊಟಕುಗೊಳಿಸಿದ ಸಾಕ್ಷಿಗಳ ಹೆಸರನ್ನು ಪಟ್ಟಿ ಮಾಡಲು ಮತ್ತಷ್ಟು ಸಮಯಾವಕಾಶ ಕೋರಿತು. ಸಾಕ್ಷಿಗಳ ಹೇಳಿಕೆಗಳನ್ನು ಮೊಟಕುಗೊಳಿಸದ ಯಥಾಸ್ಥಿತಿ ಹೇಳಿಕೆಯ ದಾಖಲೆ ಆರೋಪಪಟ್ಟಿಯ ಜತೆಗಿದ್ದು ಅದರ ಪ್ರತಿಯನ್ನು ಒದಗಿಸುವಂತೆ ಪ್ರಕರಣದ ಮತ್ತೋರ್ವ ಆರೋಪಿ ಪ್ರಸಾದ್ ಪುರೋಹಿತ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭ ನ್ಯಾಯಪೀಠವು ಮುಂದಿನ ವಿಚಾರಣೆಯನ್ನು ಆಗಸ್ಟ್ 2ಕ್ಕೆ ನಿಗದಿಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News