#ಮೀಟೂ ಸಮಿತಿಯನ್ನು ಸದ್ದಿಲ್ಲದೆ ವಿಸರ್ಜಿಸಿದ ಕೇಂದ್ರ ಸರಕಾರ

Update: 2019-07-22 16:20 GMT

ಹೊಸದಿಲ್ಲಿ,ಜು.22: ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಭಾರತದಲ್ಲಿ ಮೀ ಟೂ ಅಭಿಯಾನವು ಉತ್ತುಂಗದಲ್ಲಿದ್ದಾಗ ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳಗಳನ್ನು ತಡೆಯಲು ಕಾನೂನಿನ ಚೌಕಟ್ಟಿನಡಿ ಮಾಡಬಹುದಾದ ರಚನಾತ್ಮಕ ಬದಲಾವಣೆಗಳ ಕುರಿತು ಪರಿಶೀಲಿಸಲು ರಚಿಸಲಾಗಿದ್ದ ಸಚಿವರ ಸಮಿತಿಯನ್ನು ಸರಕಾರವು ಸದ್ದಿಲ್ಲದೆ ವಿಸರ್ಜಿಸಿದೆ. ಸುದ್ದಿ ಜಾಲತಾಣ ‘The Quint’ ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಉತ್ತರವು ಈ ವಿಷಯವನ್ನು ಬಹಿರಂಗಗೊಳಿಸಿದೆ. ಆರ್‌ಟಿಐ ಕಾಯ್ದೆಯ ಕಲಂ 8(1)ರಡಿ ಸಮಿತಿಯ ಸಭೆಗಳ ನಡಾವಳಿಗಳನ್ನು ಬಹಿರಂಗಗೊಳಿಸಲು ಸರಕಾರವು ನಿರಾಕರಿಸಿದೆ.

ಹಲವಾರು ಮಹಿಳೆಯರಿಂದ ತನ್ನ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳ ಹಿನ್ನೆಲೆಯಲ್ಲಿ ಆಗಿನ ಸಹಾಯಕ ವಿದೇಶಾಂಗ ವ್ಯವಹಾರಗಳ ಸಚಿವ ಎಂ.ಜೆ.ಅಕ್ಬರ್ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ ಸರಕಾರವು ಸಮಿತಿ ರಚನೆಯನ್ನು ಪ್ರಕಟಿಸಿತ್ತು. ಮೋದಿ ಸರಕಾರದಲ್ಲಿ ಹಿರಿಯ ಸಚಿವರಾಗಿದ್ದ ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್, ಮೇನಕಾ ಗಾಂಧಿ ಮತ್ತು ನಿತಿನ್ ಗಡ್ಕರಿ ಅವರು ಈ ಸಮಿತಿಯಲ್ಲಿದ್ದರು. ಮೂರು ತಿಂಗಳಲ್ಲಿ ತನ್ನ ಶಿಫಾರಸುಗಳನ್ನು ಸರಕಾರಕ್ಕೆ ಸಲ್ಲಿಸುವಂತೆ ಈ ಸಮಿತಿಗೆ ಸೂಚಿಸಲಾಗಿತ್ತು.

ಸಮಿತಿಯು ನಡೆಸಿದ ಸಭೆಗಳ ಸಂಖ್ಯೆ,ಎಲ್ಲ ಸಭೆಗಳ ದಿನಾಂಕಗಳು ಮತ್ತು ಪ್ರತಿ ಸಭೆಯ ನಡಾವಳಿಯ ವಿವರಗಳನ್ನು ನೀಡುವಂತೆ ಆರ್‌ಟಿಐ ಅರ್ಜಿಯಲ್ಲಿ ಕೋರಲಾಗಿತ್ತು. ಸಮಿತಿಯ ಶಿಫಾರಸುಗಳ ಪ್ರತಿಯನ್ನು ನೀಡುವಂತೆಯೂ ಕೇಳಿಕೊಳ್ಳಲಾಗಿತ್ತು. ಆದರೆ ಸರಕಾರವು ಇವುಗಳನ್ನು ಸ್ಪಷ್ಟವಾಗಿ ನಿರಾಕರಿಸಿದೆ.

ಲೈಂಗಿಕ ಕಿರುಕುಳ ಕುರಿತು ಹಾಲಿ ಇರುವ ಕಾನೂನುಗಳು ಮತ್ತು ನೀತಿಗಳನ್ನು ಪರಿಶೀಲಿಸುವುದಾಗಿ ಹಾಗೂ ಅವುಗಳನ್ನು ಬಲಗೊಳಿಸಲು ಮಾರ್ಗೋಪಾಯಗಳನ್ನು ಶಿಫಾರಸು ಮಾಡುವುದಾಗಿ ಸರಕಾರವು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಭರವಸೆ ನೀಡಿತ್ತು. ಕಾಲಮಿತಿಯೊಳಗೆ ಅನುಷ್ಠಾನದೊಂದಿಗೆ ನ್ಯಾಯವು ದೊರೆಯುವುದನ್ನು ಖಚಿತಪಡಿಸಲು ಸೂಕ್ತ ಮಾರ್ಗಗಳನ್ನು ಕಂಡುಕೊಳ್ಳಲೂ ತಾನು ಬಯಸಿರುವುದಾಗಿ ಅದು ಹೇಳಿತ್ತು.

 ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳಗಳನ್ನು ತಡೆಯಲು ಭಾರತದ ಕಾನೂನು ಪ್ರಮುಖ ಹೆಜ್ಜೆ ಎಂದು ಪ್ರಶಂಸಿಸಲ್ಪಟ್ಟಿತ್ತು. ಆದರೆ ಕಾಲವು ಸರಿದಂತೆ ಕಾನೂನಿನಲ್ಲಿ ಹಲವಾರು ಲೋಪಗಳು ಮತ್ತು ಕೊರತೆಗಳು ಕಂಡು ಬಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News