ವಿಜ್ಞಾನದಲ್ಲಿ ಹೊಸ ಎತ್ತರಕ್ಕೇರುವ ಭಾರತದ ಸಂಕಲ್ಪಕ್ಕೆ ಚಂದ್ರಯಾನ-2 ನಿದರ್ಶನ: ಪ್ರಧಾನಿ

Update: 2019-07-22 16:45 GMT

ಹೊಸದಿಲ್ಲಿ,ಜು.22: ಚಂದ್ರಯಾನ-2ರ ಉಡಾವಣೆ ಭಾರತೀಯ ವಿಜ್ಞಾನದಲ್ಲಿ ಹೊಸ ಎತ್ತರಕ್ಕೇರುವ ಭಾರತೀಯ ವಿಜ್ಞಾನಿಗಳ ತಾಕತ್ತು ಮತ್ತು ದೇಶದ 130 ಕೋಟಿ ಪ್ರಜೆಗಳ ದೃಢಸಂಕಲ್ಪಕ್ಕೆ ನಿದರ್ಶನವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಚಂದ್ರಯಾನ-2ರ ಯಶಸ್ವಿ ಉಡಾವಣೆಯ ಬಳಿಕ ಸರಣಿ ಟ್ವೀಟ್‌ಗಳನ್ನು ಮಾಡಿರುವ ಮೋದಿ,ಇಂದು ಪ್ರತಿಯೊಬ್ಬ ಭಾರತೀಯನಿಗೂ ಅತೀವ ಹೆಮ್ಮೆಯ ದಿನವಾಗಿದೆ ಎಂದಿದ್ದಾರೆ.

ಚಂದ್ರಯಾನ-2ರಲ್ಲಿ ಬಳಕೆಯಾಗಿರುವ ದೇಶಿಯ ವ್ಯವಸ್ಥೆಯನ್ನು ಪ್ರಸ್ತಾಪಿಸಿ,ಈ ಅಭಿಯಾನದ ಹೃದಯ ಭಾರತೀಯವಾಗಿದೆ, ಅದರ ಸ್ಫೂರ್ತಿ ಭಾರತೀಯವಾಗಿದೆ ಎಂದು ಪ್ರಶಂಸಿಸಿದ್ದಾರೆ.

ಚಂದ್ರಯಾನ-2ರಂತಹ ಪ್ರಯತ್ನಗಳು ನಮ್ಮ ಯುವಜನರನ್ನು ವಿಜ್ಞಾನ,ಅತ್ಯುನ್ನತ ಗುಣಮಟ್ಟದ ಸಂಶೋಧನೆ ಮತ್ತು ಆವಿಷ್ಕಾರಗಳತ್ತ ಉತ್ತೇಜಿಸುತ್ತವೆ. ಚಂದ್ರಯಾನವು ಭಾರತದ ಚಂದ್ರ ಸಂಬಂಧಿ ಕಾರ್ಯಕ್ರಮಗಳಿಗೆ ಇನ್ನಷ್ಟು ಉತ್ತೇಜನ ನೀಡಲಿದೆ. ಚಂದ್ರನ ಕುರಿತು ನಮಗಿರುವ ಜ್ಞಾನವು ಗಣನೀಯವಾಗಿ ಹೆಚ್ಚಲಿದೆ ಎಂದಿರುವ ಪ್ರಧಾನಿ,ಚಂದ್ರಯಾನ-2 ಅಭಿಯಾನವು ವಿಶಿಷ್ಟವಾಗಿದೆ. ಅದು ಈ ಹಿಂದೆ ಯಾವುದೇ ರಾಷ್ಟ್ರವು ಅನ್ವೇಷಿಸಿರದ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಅನ್ವೇಷಣೆ ಮತ್ತು ಅಧ್ಯಯನಗಳನ್ನು ನಡೆಸಲಿದೆ ಎಂದೂ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News