ಲೋಕಸಭೆಯಲ್ಲಿ ಎನ್‌ಎಂಸಿ ಮಸೂದೆ ಮಂಡನೆ

Update: 2019-07-22 17:24 GMT

ಹೊಸದಿಲ್ಲಿ, ಜು.22: 63 ವರ್ಷ ಹಿಂದಿನ ಇಂಡಿಯನ್ ಮೆಡಿಕಲ್ ಕೌನ್ಸಿಲ್‌ನ ಸ್ಥಾನದಲ್ಲಿ ನ್ಯಾಷನಲ್ ಮೆಡಿಕಲ್ ಕಮಿಷನ್ (ರಾಷ್ಟ್ರೀಯ ವೈದ್ಯಕೀಯ ಆಯೋಗ)ವನ್ನು ರಚಿಸುವ ಪ್ರಸ್ತಾಪದ ಮಸೂದೆಯನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಲಾಗಿದೆ.

 1956ರ ಭಾರತೀಯ ವೈದ್ಯಕೀಯ ಸಮಿತಿ ಕಾಯ್ದೆ (ಐಎಂಸಿ) ಯನ್ನು ರದ್ದುಗೊಳಿಸುವ ಅಂಶವನ್ನೂ ಒಳಗೊಂಡಿರುವ ಮಸೂದೆಯನ್ನು ಆರೋಗ್ಯ ಸಚಿವ ಹರ್ಷವರ್ಧನ್ ಮಂಡಿಸಿದರು. ದೇಶದ ವೈದ್ಯಕೀಯ ಕಾಲೇಜುಗಳನ್ನು ನಿಯಂತ್ರಿಸುವ ಎಂಎನ್‌ಸಿ ಕಾಯ್ದೆಯಲ್ಲಿ ಹಲವು ನ್ಯೂನತೆಗಳಿರುವ ಕಾರಣ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡುತ್ತದೆ ಎಂದು ಸರಕಾರ ಹೇಳಿದೆ.

 ಹೊಸ ಮಸೂದೆಯಲ್ಲಿ ದೇಶದಾದ್ಯಂತ ವೈದ್ಯಕೀಯ ಶಿಕ್ಷಣದಲ್ಲಿ ಏಕರೀತಿಯ ಮಾನದಂಡ, ಅಂತಿಮ ವರ್ಷದ ಎಂಬಿಬಿಎಸ್ ಪರೀಕ್ಷೆಯನ್ನು ಸ್ನಾತಕೋತ್ತರ ಪದವಿಗೆ ಪ್ರವೇಶ ಪರೀಕ್ಷೆಯೆಂದು ಪರಿಗಣಿಸುವಂತೆ ಹಾಗೂ ವಿದೇಶದಲ್ಲಿ ವೈದ್ಯಕೀಯ ಪದವಿ ಪಡೆದಿರುವ ವಿದ್ಯಾರ್ಥಿಗಳಿಗೆ ಸ್ಕ್ರೀನಿಂಗ್ ಟೆಸ್ಟ್(ನ್ಯಾಷನಲ್ ಎಕ್ಸಿಟ್ ಟೆಸ್ಟ್) ನಡೆಸುವ ಪ್ರಸ್ತಾವವಿದೆ.

 ಈಗ ವಿವಿಧ ಮೆಡಿಕಲ್ ಕಾಲೇಜುಗಳು ಎಂಬಿಬಿಎಸ್ ಪರೀಕ್ಷೆಗೆ ವಿವಿಧ ರೀತಿಯ ಮಾದರಿಯನ್ನು ಅನುಸರಿಸುತ್ತಿವೆ. ಹೊಸ ಮಸೂದೆಯಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ಪರೀಕ್ಷೆಗೆ ರಾಷ್ಟ್ರದಲ್ಲೆಡೆ ಏಕರೀತಿಯ ಮಾದರಿಯನ್ನು ಅನುಸರಿಸಲಾಗುತ್ತದೆ. ಎಂಬಿಬಿಎಸ್ ಮತ್ತು ಸ್ನಾತಕೋತ್ತರ ಕಾಲೇಜುಗಳಲ್ಲಿ ಶುಲ್ಕ ಸಹಿತ ಸೀಟುಗಳ ಸಂಖ್ಯೆಯನ್ನು ಶೇ.50ಕ್ಕೆ ಪರಿಮಿತಗೊಳಿಸಲಾಗಿದೆ. 20 ಸದಸ್ಯರನ್ನು ಒಳಗೊಂಡಿರುವ ಎನ್‌ಎಂಸಿಯಲ್ಲಿ 20 ಸದಸ್ಯರನ್ನು ನಾಮನಿರ್ದೇಶನದ ಮೂಲಕ ಹಾಗೂ ಉಳಿದವರನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಎನ್‌ಎಂಸಿ ಮುಂದಿರಿಸುವ ಮಾನದಂಡವನ್ನು ಅಳವಡಿಸಿಕೊಂಡಿರುವುದನ್ನು ವೈದ್ಯಕೀಯ ಕಾಲೇಜುಗಳು ದೃಢಪಡಿಸಬೇಕು. ಬಳಿಕ ವಾರ್ಷಿಕ ನವೀಕರಣದ ಅಗತ್ಯ ಇರುವುದಿಲ್ಲ ಎಂದು ಮಸೂದೆಯಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News