ಎಂಟಿಎನ್‌ಎಲ್ ಕಟ್ಟಡದಲ್ಲಿ ಬೆಂಕಿ: ಟೆರೇಸ್‌ನಲ್ಲಿ ಸಿಲುಕಿದ ಎಲ್ಲರ ರಕ್ಷಣೆ

Update: 2019-07-22 17:50 GMT

ಮುಂಬೈ, ಜು. 22: ಮುಂಬೈಯ ಬಾಂದ್ರಾ ವೆಸ್ಟ್‌ನಲ್ಲಿರುವ ಮಹಾನಗರ ಟೆಲಿಫೋನ್ ನಿಗಮ ಲಿಮಿಟೆಡ್ (ಎಂಟಿಎನ್‌ಎಲ್) ನಲ್ಲಿ ಸೋಮವಾರ ಅಪರಾಹ್ನ 3 ಗಂಟೆಗೆ ಬೆಂಕಿ ಆಕಸ್ಮಿಕ ಸಂಭವಿಸಿದೆ. 10 ಮಹಡಿಯ ಈ ಕಟ್ಟಡದ ಟೆರೇಸ್‌ನಲ್ಲಿ ಸಿಲುಕಿದ್ದ ಎಲ್ಲ 84 ಜನರನ್ನು ರಕ್ಷಿಸಲಾಗಿದೆ.

ಅಗ್ನಿಶಾಮಕ ಕೇಂದ್ರದ ಸಮೀಪ ಇರುವ ಮೂರು ಮತ್ತು ನಾಲ್ಕನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಕೂಡಲೇ ಸ್ಥಳಕ್ಕೆ 14 ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದವು. ಆ್ಯಂಬುಲೆನ್ಸ್‌ಗಳು ಹಾಗೂ 6 ನೀರಿನ ಟ್ಯಾಂಕ್‌ಗಳು ಸ್ಥಳದಲ್ಲಿದ್ದವು. ಬೆಂಕಿ ಕಾಣಿಸಿಕೊಂಡ ಬಳಿಕ ಸಂಪೂರ್ಣ ಕಟ್ಟಡ ಹೊಗೆಯಿಂದ ತುಂಬಿತು. ಇದರಿಂದ ಕೆಲವರು ಟೆರೇಸ್‌ನಲ್ಲಿ ಸಿಲುಕಿಕೊಂಡರು. ರಕ್ಷಣಾ ಕಾರ್ಯಾಚರಣೆ ನಡೆಸಿ ಅವರನ್ನು ರಕ್ಷಿಸಲಾಯಿತು ಎಂದು ಅಗ್ನಿಶಾಮಕ ದಳದ ಮುಖ್ಯಾಧಿಕಾರಿ ಪಿ. ರಹಂಗ್ಡಾಲೆ ತಿಳಿಸಿದ್ದಾರೆ.

ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಫೈರ್ ರೋಬೋಟ್ ಅನ್ನು ಬಳಸಿದರು. ಈ ರೋಬೋಟ್ ಅನ್ನು ಇತ್ತೀಚೆಗೆ ಅಗ್ನಿಶಾಮಕ ದಳಕ್ಕೆ ನಿಯೋಜಿಸಲಾಗಿದೆ. ಎಂಟಿಎನ್‌ಎಲ್ ಕಟ್ಟಡದ ಆವರಣದಲ್ಲಿದ್ದ ಬೈಕ್‌ಗಳನ್ನು ಸ್ಥಳಾಂತರಿಸಲು ಅಗ್ನಿಶಾಮಕ ದಳದ ಸಿಬ್ಬಂದಿಗೆ ಸ್ಥಳೀಯ ನಾಗರಿಕರು ನೆರವು ನೀಡಿದರು. ಹೊಗೆ ಕುಡಿದ ಕಾರಣಕ್ಕೆ ಅಗ್ನಿಶಾಮಕ ದಳದ ಓರ್ವ ಸಿಬ್ಬಂದಿ ಅಸ್ವಸ್ಥಗೊಂಡಿದ್ದಾರೆ. ಅವರನ್ನು ಭಾಭಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News