ಹುತಾತ್ಮ ಯೋಧ ಔರಂಗಜೇಬ್ ಸಹೋದರರಿಬ್ಬರು ಸೇನೆಗೆ ಸೇರ್ಪಡೆ

Update: 2019-07-23 06:52 GMT

ಶ್ರೀನಗರ: ಹುತಾತ್ಮ ಸೈನಿಕ ಔರಂಗಜೇಬ್ ಅವರ ಇಬ್ಬರು ಸಹೋದರರು ಸೇನೆ ಸೇರಿದ್ದಾರೆ. "ದೇಶಪ್ರೇಮದ ಅವರ ಪರಂಪರೆಯನ್ನು ಮುಂದುವರಿಸಲು ಮತ್ತು ಅವರ ಸಾವಿಗೆ ಪ್ರತೀಕಾರ ತೆಗೆದುಕೊಳ್ಳುವ ಸಲುವಾಗಿ ಸೇನೆ ಸೇರುತ್ತಿರುವುದಾಗಿ" ಅವರು ಪ್ರಕಟಿಸಿದ್ದಾರೆ.

ಕಳೆದ ವರ್ಷ ಜೂನ್‌ನಲ್ಲಿ ಈದ್ ಪ್ರಾರ್ಥನೆಗೆ ಹೋಗುತ್ತಿದ್ದ ಸಂದರ್ಭ ಪುಲ್ವಾಮದಲ್ಲಿ ಉಗ್ರರು ಔರಂಗಜೇಬ್ ಅವರನ್ನು ಅಪಹರಿಸಿ ಹತ್ಯೆ ಮಾಡಿದ್ದರು.

"ನಮ್ಮ ದೇಶದ ಮೇಲಿನ ಪ್ರೀತಿಯಿಂದ ಹಾಗೂ ಹಿಜ್‌ಬುಲ್ ಉಗ್ರರು ದಕ್ಷಿಣ ಕಾಶ್ಮೀರದಲ್ಲಿ ನಮ್ಮ ಸಹೋದರನನ್ನು ಹತ್ಯೆ ಮಾಡಿದ್ದಕ್ಕೆ ಪ್ರತೀಕಾರದ ಸವಾಲನ್ನು ಸ್ವೀಕರಿಸಿ ಸೇನೆಗೆ ಸೇರಿದ್ದೇವೆ" ಎಂದು ಶಬ್ಬೀರ್ ಸಲಾನಿ ಮತ್ತು ಅಣ್ಣ ಮೊಹ್ಮದ್ ತಾರಿಕ್ ಸ್ಪಷ್ಟಪಡಿಸಿದ್ದಾರೆ. ಇಬ್ಬರೂ ಪಂಜಾಬ್ ರಿಜಿಮೆಂಟ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.

"ಲಿಖಿತ, ವೈದ್ಯಕೀಯ ಮತ್ತು ದೈಹಿಕ ಪರೀಕ್ಷೆ ಹೀಗೆ ನೇಮಕಾತಿಯ ಎಲ್ಲ ಪರೀಕ್ಷೆಗಳಲ್ಲಿ ನಾವು ಅರ್ಹತೆ ಪಡೆದಿದ್ದೇವೆ ಎಂದು ತಾರಿಕ್ (23) ಹಾಗೂ ಶಬ್ಬೀರ್ (21) ಸ್ಪಷ್ಟಪಡಿಸಿದ್ದಾರೆ. ಕಳೆದ ಮೇ ತಿಂಗಳಲ್ಲಿ ಪೂಂಚ್ ಪ್ರದೇಶ ಸುರಂಕೋಟ್‌ನಲ್ಲಿ ನಡೆದ ಸೇನಾ ನೇಮಕಾತಿ ರ್ಯಾಲಿಯಲ್ಲಿ ಈ ಸಾಧನೆ ಮಾಡಿದ್ದಾಗಿ ಹೇಳಿದ್ದಾರೆ. ಕಳೆದ ವರ್ಷ ಜೂ.14ರಂದು ಸಹೋದರ ಔರಂಗಜೇಬ್‌ನನ್ನು ಹತ್ಯೆ ಮಾಡಿದ ಬಳಿಕ ಆತನ ಸಾವಿಗೆ ಪ್ರತೀಕಾರ ತೆಗೆದುಕೊಳ್ಳುವುದು ಬಾಕಿ ಇತ್ತು ಎಂದು ತಿಳಿಸಿದ್ದಾರೆ.

ತಂದೆ ಹನೀಫ್ ಸಲನಿ ಕೂಡಾ ನಿವೃತ್ತ ಯೋಧರಾಗಿದ್ದು, ಕಳೆದ ಫೆ. 3ರಂದು ಜಮ್ಮುವಿನ ವಿಜಯಪುರದಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದರು.

"ಇಬ್ಬರು ಮಕ್ಕಳಾದ ತಾರೀಕ್ ಹಾಗೂ ಶಬ್ಬೀರ್, ಕರ್ತವ್ಯದಲ್ಲಿದ್ದಾಗ ಹತ್ಯೆಗೀಡಾದ ಅಣ್ಣನ ಸಾಹಸದಿಂದ ಸ್ಫೂರ್ತಿ ಪಡೆದಿದ್ದಾರೆ" ಎಂದು ರಾಂಚಿಯಿಂದ ದೂರವಾಣಿ ಮೂಲಕ ಮಾತನಾಡಿದ ಹನೀಫ್ ಹೇಳಿದರು. ಇಬ್ಬರು ಮಕ್ಕಳು ಪರೇಡ್‌ನಲ್ಲಿ ಪಾಲ್ಗೊಳ್ಳುವುದನ್ನು ವೀಕ್ಷಿಸುವ ಸಲುವಾಗಿ ಅವರು ಪತ್ನಿ ಸಮೇತರಾಗಿ ರಾಂಚಿಗೆ ತೆರಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News